ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ

ಬಹುಪಾಲು BJP-RSS ಜೊತೆಗೆ, ನನಗೆ ಕಾಂಗ್ರೆಸ್ ಪಕ್ಷದ ಎರಡನೇ ಹಂತದ ನಾಯಕರ ಬೆಂಬಲ ಸಹ ಇದೆ: ಕೆ.ಎಸ್.ಈಶ್ವರಪ್ಪ (ಸಂದರ್ಶನ)

ಆರ್‌ಎಸ್‌ಎಸ್‌–ಬಿಜೆಪಿಯ ಶಕ್ತಿ ಕೇಂದ್ರವಾಗಿ ಹಾಗೂ ರಾಜಕೀಯ ವಿದ್ಯಮಾನಗಳ ಕಾರಣಕ್ಕೆ ಗಮನ ಸೆಳೆಯುವ ಶಿವಮೊಗ್ಗ, ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಈಶ್ವರಪ್ಪ ಬಂಡಾಯದಿಂದ ರಾಜ್ಯವ್ಯಾಪಿ ಸುದ್ದಿಯಲ್ಲಿದೆ. ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಈಶ್ವರಪ್ಪ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಈಶ್ವರಪ್ಪ ಅವರು, ಚುನಾವಣೆ ಮತ್ತು ಕ್ಷೇತ್ರದ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಂತಿವೆ...

Q

ಇಡೀ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೀರಿ. ಪ್ರಸ್ತುತ ಪರಿಸ್ಥಿತಿ ಕುರಿತು ನಿಮ್ಮ ಪ್ರತಿಕ್ರಿಯೆ ಏನು?

A

ಜನರ ಪ್ರತಿಕ್ರಿಯೆ ಅಗಾಧವಾಗಿದೆ. ಶೇ.70ರಷ್ಟು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಈ ಕಾರ್ಯಕರ್ತರು ನನ್ನ ಕೆಲಸವನ್ನು ಜನರಿಗೆ ತಿಳಿಸುವಲ್ಲಿ ನನ್ನ ಕಾರ್ಯವನ್ನು ಸುಲಭಗೊಳಿಸಿದ್ದಾರೆ. ನಮ್ಮ ರಾಷ್ಟ್ರಭಕ್ತರ ಬಳಗ ಕ್ಷೇತ್ರದಾದ್ಯಂತ 2,238 ಬೂತ್ ಸಮಿತಿಗಳನ್ನು ರಚಿಸಿದ್ದು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿದ್ದಾರೆ. ಎಲ್ಲ ಜಾತಿ, ಸಮುದಾಯದ ಜನರು ನಮಗೆ ಬೆಂಬಲ ನೀಡುತ್ತಿದ್ದಾರೆ.

Q

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇಕೆ?

A

ನರೇಂದ್ರ ಮೋದಿಯವರು ಯಾವಾಗಲೂ ಕಾಂಗ್ರೆಸ್ ತಾಯಿ ಮತ್ತು ಮಗನ ಕೈಯಲ್ಲಿದೆ. ಅಂತಹ ರಾಜವಂಶದ ರಾಜಕಾರಣವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ಬಿಎಸ್ ಯಡಿಯೂರಪ್ಪ ಸಂಸದೀಯ ಮಂಡಳಿಯ ಸದಸ್ಯ, ಅವರ ಪುತ್ರರೊಬ್ಬರು ಸಂಸದ ಮತ್ತು ಮತ್ತೊಬ್ಬ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿಯಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಸದ್ಯ ರಾಜ್ಯ ಬಿಜೆಪಿ ಬಿಎಸ್‌ವೈ ಕುಟುಂಬದ ಕೈಯಲ್ಲಿದೆ. ಎರಡನೇ ಕಾರಣ ಸಿ.ಟಿ.ರವಿ, ಸದಾನಂದಗೌಡ, ಪ್ರತಾಪ್ ಸಿಂಹ, ಯತ್ನಾಳ್ ಮೊದಲಾದ ಹಿಂದುತ್ವ ಸಿದ್ಧಾಂತದ ನಾಯಕರನ್ನು ಬದಿಗೊತ್ತಿರುವುದು.

Q

ನಿಮ್ಮ ಮಗನಿಗೆ ಪಕ್ಷ ಟಿಕೆಟ್ ನಿರಾಕರಿಸದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ತಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೀರಿ. ಇದು ವಂಶದ ರಾಜಕಾರಣ ಎಂದೂ ಅರ್ಥವಲ್ಲವೇ?

A

ಪ್ರಧಾನಿ ಮೋದಿ ಮತ್ತು ನಮ್ಮ ನಾಯಕರು ರಾಜಕೀಯದಲ್ಲಿ ಒಂದೇ ಕುಟುಂಬ ಒಬ್ಬ ವ್ಯಕ್ತಿ ಎಂಬ ನಿಯಮವನ್ನು ಅನುಸರಿಸಲು ನಿರ್ಧರಿಸಿದ್ದಾರೆ. ನಾನು ಶಾಸಕನೂ ಅಲ್ಲ, ಮಂತ್ರಿಯೂ ಅಲ್ಲ ಮತ್ತು ಯಾವುದೇ ಅಧಿಕೃತ ಸ್ಥಾನವನ್ನು ಹೊಂದಿಲ್ಲ. ಪಕ್ಷ ನನ್ನ ಮಗನಿಗೆ ಟಿಕೆಟ್ ನೀಡಬಹುದಿತ್ತು. ಯಡಿಯೂರಪ್ಪ ಅವರು ಚುನಾವಣೆಗೆ ಆರು ತಿಂಗಳ ಮೊದಲು ಕಂಠೇಶ್ ಅವರಿಗೆ ಟಿಕೆಟ್ ಭರವಸೆ ನೀಡಿದ್ದರುಯ ಹಾವೇರಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ತಿಳಿಸಿದ್ದರು.

Q

ನೀವು ಈಗಲೂ ನಿಮ್ಮ ಪ್ರಚಾರದಲ್ಲಿ ಮೋದಿಯವರ ಚಿತ್ರವನ್ನು ಬಳಸುತ್ತಿದ್ದೀರಿ...?

A

ಮೋದಿ ವಿಶ್ವ ನಾಯಕ. ಪ್ರತಿಯೊಬ್ಬ ಹಿಂದುವೂ ಗಣೇಶನಿಗೆ ಪೂಜೆ ಸಲ್ಲಿಸುತ್ತಾನೆ. ಹಾಗೆ ಮಾಡುವುದನ್ನು ಯಾರಾದರೂ ತಡೆಯಬಹುದೇ? ಮೋದಿ ನನ್ನ ರೋಲ್ ಮಾಡೆಲ್ ಮತ್ತು ನಾನು ಅವರನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಬಿಜೆಪಿ ನಾಯಕರು ಮೋದಿಯವರನ್ನು ಅವಮಾನಿಸಿದ್ದಾರೆ. ಚುನಾವಣೆಯ ನಂತರವೂ ಮೋದಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತೇನೆ.

Q

ಚುನಾವಣಾ ದಿನಾಂಕ ಘೋಷಣೆಯಾದ ನಂತರ ಬಿಜೆಪಿ ನಾಯಕರು ನಿಮ್ಮೊಂದಿಗೆ ನಡೆದುಕೊಂಡ ರೀತಿಗೆ ಅತೃಪ್ತಿ ಇದೆಯೇ?

A

ಕೇಂದ್ರ ನಾಯಕರು ನನ್ನನ್ನು ಚುನಾವಣೆಗೆ ನಿಲ್ಲಿಸಿಲ್ಲ. ಆದರೆ, ಸ್ಥಳೀಯ ನಾಯಕರು ನಡೆದುಕೊಳ್ಳುತ್ತಿರುವ ರೀತಿ ನನಗೆ ತೃಪ್ತಿ ತಂದಿಲ್ಲ. ಸ್ಥಳೀಯ ಮುಖಂಡರು ಬುಧವಾರ ರಾತ್ರಿ ಶಿಕಾರಿಪುರದ ರಾಷ್ಟ್ರ ಭಕ್ತರ ಬಳಗದ ಕಚೇರಿಯ ಬಾಗಿಲಲ್ಲಿ ಕುಂಕುಮ, ಅರಿಶಿನ, ಹೋಳು ನಿಂಬೆಹಣ್ಣು, ಹೂವುಗಳನ್ನು ಇಟ್ಟುಕೊಂಡು ಮಾಟಮಂತ್ರ ಮಾಡಿಸಿದ್ದಾರೆ. ಶಿಕಾರಿಪುರದಲ್ಲಿ ನನಗೆ ಸಿಗುತ್ತಿರುವ ಬೆಂಬಲ ಬಿಜೆಪಿ ನಾಯಕರಲ್ಲಿ ಭಯ ಹುಟ್ಟಿಸಿದೆ.

Q

ನೀವು ಬಿಜೆಪಿ ಮತಗಳನ್ನು ಪಡೆಯುತ್ತೀರಿ, ಅದು ಕಾಂಗ್ರೆಸ್‌ಗೆ ಸಹಾಯ ಮಾಡುತ್ತದೆ ಎಂಬ ಗ್ರಹಿಕೆಯಿದೆ...?

A

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಶೇ.70ರಷ್ಟು ಬೆಂಬಲದ ಜೊತೆಗೆ, ವಿವಿಧ ತಾಲ್ಲೂಕುಗಳಲ್ಲಿ ಎರಡನೇ ಹಂತದ ಕಾಂಗ್ರೆಸ್ ನಾಯಕರು ಕೂಡ ನನಗೆ ಬೆಂಬಲ ನೀಡುತ್ತಿದ್ದಾರೆ, ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರಾದ ಸಿಟಿ ರವಿ, ಸದಾನಂದಗೌಡ, ಪ್ರತಾಪ್ ಸಿಂಹ ಅವರನ್ನು ಕಣಕ್ಕಿಳಿಸಿದ್ದರಿಂದ ಜೆಡಿಎಸ್ ನಾಯಕರು ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಸಮಾಜದ ಎಲ್ಲ ವರ್ಗದವರಿಂದ ಹಾಗೂ ಎಲ್ಲ ಪಕ್ಷಗಳ ಮುಖಂಡರ ಬೆಂಬಲ ನಮಗೆ ಸಿಗುತ್ತಿದೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com