ವಿಧಾನ ಪರಿಷತ್ ಚುನಾವಣೆ: ಮೈತ್ರಿ ಮುಂದುವರೆಸಲು BJP-JDS ನಿರ್ಧಾರ; ಪ್ರಜ್ವಲ್ ಪ್ರಕರಣ ಅಸ್ತ್ರವಾಗಿಸಿಕೊಳ್ಳಲು ಕಾಂಗ್ರೆಸ್ ಮುಂದು!

ಜೂನ್ 3 ರಂದು ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದು, ಈ ನಡುವಲ್ಲೇ ಆಡಳಿತಾರೂಢ ಕಾಂಗ್ರೆಸ್ ದೋಸ್ತಿಗಳ ವಿರುದ್ಧ ಪ್ರಜ್ವಲ್ ಪ್ರಕರಣವನ್ನೇ ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ತುಮಕೂರು: ಜೂನ್ 3 ರಂದು ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದು, ಈ ನಡುವಲ್ಲೇ ಆಡಳಿತಾರೂಢ ಕಾಂಗ್ರೆಸ್ ದೋಸ್ತಿಗಳ ವಿರುದ್ಧ ಪ್ರಜ್ವಲ್ ಪ್ರಕರಣವನ್ನೇ ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಅದರ ಸುಳಿವವನ್ನು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ನೀಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಪೆನ್ ಡ್ರೈವ್ ಕೇಸ್ ಹಿಡಿದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಲೇವಡಿ ಮಾಡಿದರು.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಈಗಾಗಲೇ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪ್ರಬುದ್ಧ ಶಿಕ್ಷಕ ಮತದಾರರು ಉತ್ತರ ಕೊಟ್ಟಿದ್ದಾರೆ. ಇನ್ನುಳಿದ ಕ್ಷೇತ್ರಗಳಲ್ಲಿ ಪ್ರಜ್ವಲ್ ಪೋಟೋ ಹಾಕಿಕೊಂಡು ಕ್ಯಾಂಪೇನ್ ಮಾಡಲಿ, ನಮಗೇನು ಅಭ್ಯಂತರ ಇಲ್ಲ. ನಾವು ಚುನಾವಣೆಯನ್ನ ಫೇಸ್ ಮಾಡುತ್ತೇವೆ ಎಂದು ಹೇಳಿದರು.

ರಮೇಶ್ ಬಾಬು ಜೆಡಿಎಸ್‌ನಿಂದ ಬಂದವರು ಎಂಬ ಆರೋಪ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಮಾಹಿತಿ ತಪ್ಪು. ಹಾಗೆ ನೋಡಿದರೆ ದೇವೇಗೌಡರು ಸಹ ಕಾಂಗ್ರೆಸ್‌ ಪಾರ್ಟಿಯಿಂದ ಬಂದವರು. ಈ ದೇಶದಲ್ಲಿ ಎಲ್ಲ ಪಾರ್ಟಿಗಳಿಗೆ ಮೂಲ, ಮಾತೃ ಪಾರ್ಟಿ ಕಾಂಗ್ರೆಸ್ ಪಕ್ಷವೇ ಆಗಿದೆ. ಹಾಗಾಗಿ ದೇವೇಗೌಡರು ಸಹ ಕಾಂಗ್ರೆಸ್ ಪಾರ್ಟಿಯಿಂದ ಬಂದವರಾಗಿದ್ದಾರೆ ಎಂದರು.

ನಾನು ಕಾಂಗ್ರೆಸ್‌ಗೆ ಬಂದು ಐದು ವರ್ಷ ಆಯ್ತು. ನಾನಾಗಿಯೇ ಜೆಡಿಎಸ್‌ನಿಂದ ಆಚೆ ಬಂದಿಲ್ಲ. ನನ್ನಂತಹವರನ್ನು, ಡಿಟಿ ಶ್ರೀನಿವಾಸ, ಮಧು ಬಂಗಾರಪ್ಪರಂತಹವರನ್ನು, ಪಿ.ಜಿ.ಆರ್.ಸಿಂಧ್ಯಾ, ಎಂಸಿ ನಾಣಯ್ಯ.. ಅಂತಹವರನ್ನೆಲ್ಲ ‘ಅವರೇ’ ಆಚೆ ಕಳಿಸಿದ್ದಾರೆ. ಜೆಡಿಎಸ್‌ನಲ್ಲಿ ಅಲ್ಲ, ಜನತಾದಳದಲ್ಲಿ ನಾನು ಕುಮಾರಸ್ವಾಮಿಗಿಂತ ಸೀನಿಯರ್. ಅವರು ನನ್ನನ್ನು ನಡೆಸಿಕೊಂಡ ರೀತಿ ನಮ್ಮಂತಹವರೇ ಬಿಟ್ಟುಹೋಗುವಂತಹ ವಾತಾವರಣ ನಿರ್ಮಾಣದ್ದಾಗಿತ್ತು ಎಂದು ತಿರುಗೇಟು ನೀಡಿದರು.

ಸಂಗ್ರಹ ಚಿತ್ರ
ಕೈ ತಪ್ಪಿದ ವಿಧಾನ ಪರಿಷತ್ ಟಿಕೆಟ್‌: BJP ಹೈಕಮಾಂಡ್ ನಿರ್ಧಾರಕ್ಕೆ ರಘುಪತಿ ಭಟ್​ ಅಸಮಾಧಾನ

ಇದೇ ವೇಳೆ ತುಮಕೂರಿನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿಟಿ ಶ್ರೀನಿವಾಸ್ ಪರ ಕಾಂಗ್ರೆಸ್ ಪ್ರಚಾರಕ್ಕೆ ಬಾಬು ಚಾಲನೆ ನೀಡಿದರು.

ಮೇ 13 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಶ್ರೀನಿವಾಸ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 44,422 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಇದೆಲ್ಲವೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com