
ಬೆಂಗಳೂರು: ರಾಜ್ಯ ರಾಜಧಾನಿಯನ್ನು ರಾಜ್ಯ ಸರ್ಕಾರ''ಉಡ್ತಾ ಬೆಂಗಳೂರು'' ಮಾಡುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ವಿರುದ್ಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಶುಕ್ರವಾರ ಕಿಡಿಕಾರಿದ್ದು, ರಾಜ್ಯವನ್ನು ಮಾದಕ ದ್ರವ್ಯ ಮುಕ್ತ ರಾಜ್ಯ ಎಂದು ಸರ್ಕಾರ ಘೋಷಿಸಿರುವುದಾಗಿ ಹೇಳಿದ್ದಾರೆ.
ಮಾದಕ ದ್ರವ್ಯ ದಂಧೆಕೋರರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡ ನಂತರ ‘ಉಡ್ತಾ ಬೆಂಗಳೂರು’ ಎಂಬಂತಹ ಹೇಳಿಕೆಗಳನ್ನು ನೀಡಬಾರದಿತ್ತು. ಬಿಜೆಪಿಗರು ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಬಾರದು ಎಂದ ಪರಮೇಶ್ವರ್, ಸಾವಿರಾರು ಕಿಲೋ ಗಾಂಜಾವನ್ನು ಸರ್ಕಾರ ವಶಪಡಿಸಿಕೊಂಡಿದೆ. ಎಂಡಿಎಂಎ ಮತ್ತು ಇತರ ಸಿಂಥೆಟಿಕ್ ಡ್ರಗ್‌ಗಳನ್ನು ಸಹ ಜಪ್ತಿ ಮಾಡಲಾಗಿದೆ. ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿರುವ ಅನೇಕ ವಿದೇಶಿ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗಿದೆ ಮತ್ತು ಮಾದಕ ದ್ರವ್ಯ ದಂಧೆಕೋರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ನೂರಾರು ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ಅದನ್ನು ನಾಶಪಡಿಸುವ ಮೂಲಕ ಮಾದಕ ವಸ್ತುಗಳ ಹಾವಳಿ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದೆ. ನೂರಾರು ವಿದೇಶಿ ವಿದ್ಯಾರ್ಥಿಗಳನ್ನು ಗಡೀಪಾರು ಮಾಡಲಾಗಿದೆ. ಆದಾಗ್ಯೂ, ರಾಜ್ಯದ ರಾಜಧಾನಿ ಉಡ್ತಾ ಬೆಂಗಳೂರು ಎಂದು ಪ್ರತಿಪಕ್ಷಗಳು ಹೇಳುವುದು ಸರಿಯಲ್ಲ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇತ್ತೀಚಿಗೆ ಕೆಲವು ಹತ್ಯೆ ಪ್ರಕರಣಗಳು ನಡೆದಿದೆ. ಆದರೆ, ಇಂತಹ ಕೊಲೆಗಳು ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿರಲಿಲ್ಲವೇ ಎಂದು ಪ್ರಶ್ನಿಸಿದ ಪರಮೇಶ್ವರ್, ನಾವು ಹತ್ಯೆ ನಡೆಯಲು ಬಯಸಿದ್ದೇವೆ ಎಂಬರ್ಥದ ಹೇಳಿಕೆ ನೀಡುವುದು ಸರಿಯಲ್ಲ. ಕೊಲೆ ನಡೆದ 24 ಗಂಟೆಯೊಳಗೆ ಹಂತಕರನ್ನು ಬಂಧಿಸಿ, ಮುಂದಿನ ಕಾನೂನು ಕ್ರಮಕ್ಕೆ ಒಪ್ಪಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ಘರ್ಷಣೆಗಳು ನಡೆಯುತ್ತವೆ. ಆದಾಗ್ಯೂ, ಈ ವರ್ಷ ಶಾಂತಿಯುತವಾಗಿ ನಡೆದಿದೆ. ಈ ಬಾರಿ ರಂಜನ್ ವೇಳೆಯಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ನನ್ನ ರಾಜೀನಾಮೆ ಕೇಳುವುದು ಸರಿಯಲ್ಲ ಎಂದರು.
Advertisement