
ಚನ್ನಪಟ್ಟಣ: ಹಿತ್ತಲ ಬಾಗಿಲಿನಿಂದ ಯಾರ‍್ಯಾರೊ ಬಂದು ಸಿ.ಎಂ ಆಗಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಅವರು ನಮ್ಮೂರು ಮನೆಮಗ. ಹಾಗಾಗಿ ಅವರು ಆದಷ್ಟು ಬೇಗ ಸಿಎಂ ಆಗಲಿ ಎಂದು ಆಶಿಸುತ್ತೇನೆಂದು ಎಂಎಲ್ಸಿ ಪುಟ್ಟಣ್ಣ ಅವರು ಶನಿವಾರ ಹೇಳಿದರು.
ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಪರವಾಗಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಕುಮಾರ್ ಅವರಿಗೆ ಶೇ ನೂರರಷ್ಟು ಸಿ.ಎಂ ಅವಕಾಶವಿದೆ. ಅವರು ಆಗಬೇಕು ಕೂಡ’ ಎಂದು ಅಭಿಪ್ರಾಯಪಟ್ಟರು.
ನಾನು ಶಿವಕುಮಾರ್ ಪರ ಇದ್ದೇನೆ. ಅವರು ಹಿಂದಿನಿಂದ ಬಹಳ ಕಷ್ಟಪಟ್ಟಿದ್ದಾರೆ. ಬಹಳಷ್ಟು ಮಂದಿ ಹಿತ್ತಲ ಬಾಗಿಲಿನಿಂದ ಬಂದು ಸಿಎಂ ಆಗಿದ್ದಾರೆ. ನಾನು ಅವರ ಹೆಸರೇಳಲು ಇಷ್ಟಪಡಲ್ಲ, ಆದರೆ, ರಾಜ್ಯದಲ್ಲಿ ಬಹಳಷ್ಟು ಜನ ಆ ರೀತಿ ಮುಖ್ಯಮಂತ್ರಿಯಾಗಿದ್ದಾರೆ. ದೇವೇಗೌಡರು ಹಾಗೂ ಸಿದ್ದರಾಮಯ್ಯ ಹೋರಾಟ ಮಾಡಿಕೊಂಡು ಬಂದವರು. ಆದರೆ, ಕೆಲವು ಮಂದಿ ಹಿತ್ತಲ ಬಾಗಿಲಿನಿಂದ ಬಂದು ಸಿಎಂ ಆದರೆಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಪುಟ್ಟಣ್ಣ ಟಾಂಗ್ ನೀಡಿದರು.
ಈ ಹೇಳಿಕೆ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಅವರು ಹೋರಾಟದ ಮೂಲಕ ಮುಖ್ಯಮಂತ್ರಿಯಾಗಿದ್ದಾರೆ. ಉಳಿದ ಎಷ್ಟೋ ಮಂದಿ ಹಿತ್ತಲ ಬಾಗಿಲಿನಿಂದ ಬಂದು ಆ ಹುದ್ದೆಗೇರಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.
ಬಳಿಕ ಗ್ಯಾರಂಟಿ ಯೋಜನೆ ಇನ್ನೂ 9 ವರ್ಷದ ರಾಜ್ಯದಲ್ಲಿ ಮುಂದುವರಿಯಲಿದೆ. ಈ ಅವಧಿಗೆ ಮಾತ್ರವಲ್ಲ, ಮುಂದಿನ ಅವಧಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಐದೂ ಗ್ಯಾರಂಟಿಗಳು ಮುಂದುವರಿಯುತ್ತವೆ ಎಂದು ಹೇಳಿದರು.
ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿ, ರಾಜ್ಯದಲ್ಲಿ 23 - 25 ಸೀಟುಗಳು ಕಾಂಗ್ರೆಸ್ ಬರಲಿದೆ. ಬೆಂಗಳೂರಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. 3-5 ಹೋದ್ರೂ ಸಹಾ, 20 ಅಂತೂ ಗ್ಯಾರಂಟಿ ಬರುತ್ತದೆ. ಇದೆಲ್ಲಾ ಗ್ಯಾರಂಟಿ ಯೋಜನೆಯ ಅಂಡರ್ ಕರೆಂಟ್. ಶೇ.80ರಷ್ಟು ಮಹಿಳೆಯರು ಕಾಂಗ್ರೆಸ್ಗೆ ಮತ ನೀಡಿದ್ದಾರೆಂದು ಹೇಳಿದರು.
Advertisement