
ಬೆಂಗಳೂರು: ಎಂಎಲ್‌ಸಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಯುತ್ತಿದ್ದು, ಪಕ್ಷಕ್ಕೆ ನಿಷ್ಠರಾಗಿರುವ ಮತ್ತು ಸಂಘಟನಾಶೀಲರಾಗಿರುವವರನ್ನು ಆಯ್ಕೆ ಮಾಡುವಂತೆ ಕಾಂಗ್ರೆಸ್ ಮುಖಂಡರ ಒಂದು ವರ್ಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಟಿಕೆಟ್ ಆಕಾಂಕ್ಷಿಗಳಾದ ವಿಜಯ್ ಮುಳಗುಂದ, ವಿ ಶಂಕರ್, ಬಿಆರ್ ನಾಯ್ಡು, ಎಸ್ ಮನೋಹರ್, ಅಬ್ದುಲ್ ವಾಜಿದ್, ಎ ಕೆಂಚೇಗೌಡ, ವಿಎಸ್ ಆರಾಧ್ಯ ಮತ್ತು ಎಂ ರಾಮಚಂದ್ರಪ್ಪ ಸೇರಿದಂತೆ ಪಕ್ಷದ ಎಂಟು ಮುಖಂಡರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ವಿಧಾನಪರಿಷತ್ ನ 11 ಸ್ಥಾನಗಳಿಗೆ ಜೂನ್ 13 ರಂದು ಚುನಾವಣೆ ನಿಗದಿಯಾಗಿದೆ. ಎಂಎಲ್'ಸಿಗಳನ್ನು ಶಾಸಕರು ಆಯ್ಕೆ ಮಾಡಲಿದ್ದು, ಪಕ್ಷಗಳು ಹೊಂದಿರುವ ಶಾಸಕರ ಸಂಖ್ಯೆಯ ಆಧಾರದ ಮೇಲೆ, ಕಾಂಗ್ರೆಸ್ ಏಳು ಎಂಎಲ್‌ಸಿಗಳನ್ನು, ಬಿಜೆಪಿ ಮೂರು ಮತ್ತು ಜೆಡಿಎಸ್ ಒಬ್ಬರನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆದುಕೊಂಡಿದೆ.
ಪ್ರತಿ ಬಾರಿ ಎಂಎಲ್‌ಸಿ ಚುನಾವಣೆ ನಡೆದಾಗ ಪಕ್ಷಕ್ಕೆ ನಿಷ್ಠರಾಗಿರುವವರನ್ನು ಮಾತ್ರ ಆಯ್ಕೆ ಮಾಡಬೇಕು ಎಂಬ ಧ್ವನಿ ಶುರುವಾಗುತ್ತದೆ. ಆದರೆ ಕಾರಣಾಂತರಗಳಿಂದ ಹಿರಿಯ ನಾಯಕರು ಹಾಗೂ ಹೈಕಮಾಂಡ್ ಆಯ್ಕೆ ಮಾಡಿದವರಿಗೆ ಮಾತ್ರ ಅವಕಾಶ ಸಿಗುತ್ತಿದೆ. ಆದರೆ. ಪಕ್ಷದ ಸಂಘಟನೆಯಲ್ಲಿ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ಸ್ಪಷ್ಟ ಮಾಹಿತಿ ನಿಮ್ಮ ಬಳಿ ಇದ್ದೇ ಇರುತ್ತದೆ. ಹೀಗಾಗಿ ಅಂತಹವರು ನಾಮನಿರ್ದೇಶನಗೊಳ್ಳುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈಗಾಗಲೇ ಎಂಎಲ್‌ಸಿ, ಸಚಿವ ಅಥವಾ ಇತರೆ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದವರನ್ನು ಪರಿಗಣಿಸಬಾರದು. ಪಕ್ಷದ ಸಾಮಾನ್ಯ ಕಾರ್ಯಕರ್ತರು ಹಾಗೂ ಸಂಘಟನಾ ಚಟುವಟಿಕೆಯಲ್ಲಿ ತೊಡಗಿರುವವರನ್ನು ಆಯ್ಕೆ ಮಾಡುವುದರಿಂದ ಉತ್ತಮ ಸಂದೇಶ ರವಾನೆಯಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
Advertisement