ಪ್ರಧಾನಿ ಮೋದಿ ರಾಜಕೀಯ ಪುಡಾರಿ ಎಂದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ ನಡುವೆ ಟ್ವೀಟ್ ವಾರ್!

ಪೋಕ್ಸೋ ಕಾಯ್ದೆಯಡಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನಿಮ್ಮ ತಂದೆಯವರನ್ನು ಮನೆಯಲ್ಲಿಟ್ಟುಕೊಂಡು ನಮಗೆ ಹೆಣ್ಣುಮಕ್ಕಳ ರಕ್ಷಣೆಯ ಪಾಠ ಮಾಡಲು ಕನಿಷ್ಠ ನಿಮಗೆ ನಾಚಿಕೆ ಆಗುವುದಿಲ್ಲವೇ?
CM Siddaramaiah, BY Vijayendra
ಸಿಎಂ ಸಿದ್ದರಾಮಯ್ಯ, ಬಿ.ವೈ. ವಿಜಯೇಂದ್ರ
Updated on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಟ್ವೀಟ್ ಮಾಡಿರುವ ವಿಜಯೇಂದ್ರ, ಸಿದ್ದರಾಮಯ್ಯನವರೇ, ಒಂದೂವರೆ ವರ್ಷದ ಆಡಳಿತದಲ್ಲಿ ನಿಮ್ಮ ಕೊಡುಗೆಗಳು ಏನೇನೂ ಇಲ್ಲ, ಅಭಿವೃದ್ಧಿಯ ಹಾದಿಯಲ್ಲಿ ಬರೀ ಶೂನ್ಯ, ಭ್ರಷ್ಟತೆಯ ಸಾಲು, ಸಾಲು ಹಗರಣಗಳು, ಸಾಮಾಜಿಕ ಶೋಷಣೆಗಳು, ಸ್ತ್ರೀ ಕುಲದ ಮೇಲಿನ ದೌರ್ಜನ್ಯಗಳು ಹತ್ತು ಹಲವು ಎಂದು ವಿಜಯೇಂದ್ರ ಟೀಕಾ ಪ್ರಹಾರ ನಡೆಸಿದ್ದಾರೆ.

ಇಂದಿಗೂ ಕರ್ನಾಟಕದ ಲಕ್ಷಾಂತರ ಜನ ಗುಡಿಸಲು ವಾಸಿಗಳಾಗಿದ್ದಾರೆ, ಸ್ವಂತ ಸೂರಿಲ್ಲದೇ ವಸತಿ ಹೀನರಾಗಿದ್ದಾರೆ. ಇವರಿಗಾಗಿ ನೀವು ಒಂದೇ ಒಂದು ನಿವೇಶವನ್ನು ವಿತರಿಸಲಾಗಿಲ್ಲ. ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 5 ಸಾವಿರಕ್ಕೂ ಹೆಚ್ಚು ನಿವೇಶನಗಳ ದರೋಡೆ ನಿಮ್ಮ ಬಲಗೈ ಬಂಟ ಸಚಿವ ಭೈರತಿ ಸುರೇಶ್ ರವರ ನೇತೃತ್ವದಲ್ಲಿ ಹಾಗೂ ನಿಮ್ಮ ಮಾರ್ಗದರ್ಶನದಲ್ಲಿ ನಡೆದಿದೆ ಎಂಬುದಕ್ಕೆ ನೀವೊಬ್ಬರೇ ಉಚಿತವಾಗಿ ಪಡೆದ 14 ನಿವೇಶನಗಳು ಸಾಕ್ಷಿ ಹೇಳುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯಗಳು ನಿಮ್ಮ ವಿರುದ್ಧ ತೀರ್ಪಿತ್ತಿವೆ. ನೀವು ಪ್ರಾಮಾಣಿಕರೇ ಆಗಿದ್ದರೆ ಈಗಲೂ ಇಡಿ, ಸಿಬಿಐ ತನಿಖೆಗೆ ಏಕೆ ಹೆದರುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

‘ಕಳ್ಳ ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಿದ್ದರೆ’ ಅದನ್ನು ನೋಡಿಕೊಂಡು ಸ್ವಾಭಿಮಾನಿ ಕನ್ನಡಿಗರು ಸುಮ್ಮನಾಗಿಬಿಡುತ್ತಾರೆಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನವಷ್ಟೇ'. ಮಾತುಮಾತಿಗೂ ಅಹಿಂದ, ಅಹಿಂದ ಎಂದು ಪಠನೆ ಮಾಡುವ ನೀವು ‘ಹಿಂದ’ವರ್ಗಗಳಿಗೆ ನೀಡಿದ ಕಲ್ಯಾಣ ಕಾರ್ಯಕ್ರಮಗಳೇನು? ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಇತರ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ನೀವು ಅಧಿಕಾರಕ್ಕೆ ಬಂದ ನಂತರ ಎಷ್ಟು ಅನುದಾನ ನೀಡಿದ್ದೀರೆನ್ನುವ ದಾಖಲೆಗಳನ್ನು ಬಿಡುಗಡೆ ಮಾಡಿ ? ಎಂದಿದ್ದಾರೆ.

ಶೋಷಿತ ವರ್ಗಗಳಿಗೆ ಅನುದಾನ ಬಿಡುಗಡೆ ಮಾಡುವ ಮಾತು ಹಾಗಿರಲಿ, ವಿಶ್ವಕವಿ ಎಂದು ಮಾನ್ಯತೆ ಪಡೆದ ಪೂಜ್ಯ ವಾಲ್ಮೀಕಿ ಅವರ ಹೆಸರಿರುವ ನಿಗಮದಲ್ಲಿ ಪರಿಶಿಷ್ಟ ಪಂಗಡದ, ಆದಿವಾಸಿ ಜನರ ಕಲ್ಯಾಣದ ಕಾರ್ಯಗಳಿಗೆ ಮೀಸಲಾಗಿ ಠೇವಣಿ ಇರಿಸಿದ್ದ ಬ್ಯಾಂಕ್ ಖಾತೆಗೆ ನಿಮ್ಮ ಸಚಿವರ ಮೂಲಕ ಕನ್ನ ಹಾಕಿಸಿದವರು ನೀವಲ್ಲ ಎಂಬುದನ್ನು ನೀವು ಸಾಬೀತು ಮಾಡಲು ಸಾಧ್ಯವೇ?ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದೆಡೆ ವಿಜಯೇಂದ್ರ ಆರೋಪಗಳಿಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ವಕ್ಪ್ ಆಸ್ತಿ ವಿಚಾರದಲ್ಲಿ ಸುಬಗರ ಸೋಗು ಹಾಕುವುದೇನು ಬೇಡ. ನಿಮ್ಮದೇ ಪಕ್ಷದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಈಗಿನ ನಿಮ್ಮ ಮಿತ್ರ ಪಕ್ಷವಾದ ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೂರಾರು ರೈತ ಕುಟುಂಬಗಳ ಆಸ್ತಿಗಳನ್ನು ವಕ್ಪ್ ಬೋರ್ಡ್ ಗೆ ಖಾತೆ ಬದಲಾಯಿಸಿದ ದಾಖಲೆಗಳನ್ನು ಶೀಘ್ರದಲ್ಲಿ ನಾವು ಬಿಡುಗಡೆ ಮಾಡುತ್ತೇವೆ. ಆಗ ನಿಮ್ಮ ಪಾಪದ ಫಲವನ್ನು ನೀವೇ ಉಣ್ಣಬೇಕಾಗುವ ಸಂದರ್ಭ ಬರಬಹುದು. ಅದಕ್ಕೆ ಸಿದ್ಧರಾಗಿರಿ ಎಂದಿದ್ದಾರೆ.

ವಿಜಯೇಂದ್ರ ಅವರೇ, ನನ್ನ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸುವ ನೈತಿಕತೆ ಈ ಜನ್ಮದಲ್ಲಿ ನೀವು ಪಡೆದುಕೊಂಡಿಲ್ಲ. ಅದನ್ನು ಮುಂದಿನ ಜನ್ಮದಲ್ಲಿ ಗಳಿಸಿಕೊಳ್ಳುವ ಪ್ರಯತ್ನ ಮಾಡಬಹುದು ಅಷ್ಟೆ. ಸಿಬಿಐ ಮತ್ತು ಇಡಿ ಸಂಸ್ಥೆಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದರೆ, ಡಿನೋಟಿಪೀಕೇಷನ್, ಅಕ್ರಮ ಗಣಿಗಾರಿಕೆ, ಮನಿ ಲಾಂಡ್ರಿಂಗ್ ಹೀಗೆ ಸಾಲು ಸಾಲು ಭ್ರಷ್ಟಾಚಾರದ ಹಗರಣಗಳ ಕಿಂಗ್ ಪಿನ್ ಆಗಿರುವ ನಿಮ್ಮ ಜಾಗ ಎಲ್ಲಿರಬಹುದು ಎನ್ನುವುದನ್ನು ಒಮ್ಮೆ ಯೋಚಿಸಿ. ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುವ ದುಸ್ಸಾಹಸ ಮಾಡಬೇಡಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

CM Siddaramaiah, BY Vijayendra
ಗ್ಯಾರಂಟಿ ಯೋಜನೆ ಜಟಾಪಟಿ: ರಾಜಕೀಯ ಪುಡಾರಿ ರೀತಿ ಸುಳ್ಳು ಆರೋಪ ಮಾಡುತ್ತಿರುವುದು ವಿಷಾದನೀಯ; ಪ್ರಧಾನಿ ಮೋದಿ ವಿರುದ್ಧ ಸಿದ್ದು, ಖರ್ಗೆ ಕಿಡಿ

ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ? ಪೋಕ್ಸೋ ಕಾಯ್ದೆಯಡಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನಿಮ್ಮ ತಂದೆಯವರನ್ನು ಮನೆಯಲ್ಲಿಟ್ಟುಕೊಂಡು ನಮಗೆ ಹೆಣ್ಣುಮಕ್ಕಳ ರಕ್ಷಣೆಯ ಪಾಠ ಮಾಡಲು ಕನಿಷ್ಠ ನಿಮಗೆ ನಾಚಿಕೆ ಆಗುವುದಿಲ್ಲವೇ? ಬೇಟಿ ಬಚಾವೋ, ಬೇಟಿ ಪಡಾವೋ’’ ಎಂದು ಆಗಾಗ ಘೋಷಣೆ ಕೂಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆಗೆ ಬದ್ಧರಾಗಿದ್ದರೆ ಪೋಕ್ಸೋ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಸ್ಥಾನದಿಂದ ಮತ್ತು ಅವರನ್ನು ರಕ್ಷಿಸುತ್ತಿರುವ ನಿಮ್ಮನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ತಿರುಗೇಟು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com