ಬೆಂಗಳೂರು: ಕಾಂಗ್ರೆಸ್ ಆಮಿಷಕ್ಕೆ ಬಲಿಯಾದರೆ ಮುಂದೆ ದೇವಸ್ಥಾನಗಳನ್ನೂ ವಕ್ಫ್'ಗೆ ಮಾರಿಬಿಡುತ್ತಾರೆ. ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯುವುದಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅವರು ಪರಿಚಯಿಸಿದ ವಕ್ಫ್ ಅದಾಲತ್‌ಗಳು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ. ವಕ್ಫ್ ಕಾಯಿದೆ ಅಥವಾ ಕಂದಾಯ ಕಾನೂನುಗಳು ವಕ್ಫ್ ಅದಾಲತ್ ನಂತಹ ಸಭೆಗಳಿಗೆ ಅನುಮತಿ ನೀಡುವುದಿಲ್ಲ. ವಕ್ಫ್ ಅದಾಲತ್ ಗಳನ್ನು ನಡೆಸಲು ಸಂವಿಧಾನದ ಅಡಿಯಲ್ಲಿ ಯಾವುದೇ ಅವಕಾಶವಿಲ್ಲ. ಇದು ಅಸಂವಿಧಾನಿಕ ಮಾರ್ಗವಾಗಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದನ್ನು ನಿಲ್ಲಿಸುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಸಾವಿರಾರು ಎಕರೆ ರೈತರ ಜಮೀನಿನ ಮೇಲೆ ವಕ್ಫ್ ಬೋರ್ಡ್‌ನ ಹಠಾತ್ ಹಕ್ಕೊತ್ತಾಯಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ತುಷ್ಟೀಕರಣವೇ ನೇರ ಕಾರಣ. ಮೊಘಲರು ಮತ್ತು ಟಿಪ್ಪು ಸುಲ್ತಾನ್ ತಮ್ಮ ಮಂತ್ರಿಗಳಿಗೆ ಹೇಗೆ ವಿವಿಧ ಕೆಲಸಗಳನ್ನು ನೀಡುತ್ತಿದ್ದರೋ, ಅದೇ ರೀತಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಜಮೀರ್ ಅವರಿಗೆ ವಕ್ಫ್ ಅಡಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಸ್ತಿಯನ್ನು ಪಡೆದುಕೊಳ್ಳಲು ಟಾಸ್ಕ್ ನೀಡಿದ್ದಾರೆ. ವಕ್ಫ್ ಬೋರ್ಡ್ ನೋಟೀಸ್ ಹಿಂಪಡೆಯಬೇಕು, ಭೂ ದಾಖಲೆಗಳಲ್ಲಿ ಬದಲಾವಣೆಗಳನ್ನು ಮಾಡಬೇಕು ಮತ್ತು ಅಸಂವಿಧಾನಿಕ ವಕ್ಫ್ ಅದಾಲತ್‌ಗಳನ್ನು ತಕ್ಷಣವೇ ಕಿತ್ತುಹಾಕಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಪ್ರತಿ ಚುನಾವಣೆಗೂ ಮುನ್ನ ತನ್ನ ಅಲ್ಪಸಂಖ್ಯಾತರ ಮತಬ್ಯಾಂಕ್ ಅನ್ನು ಖುಷಿಪಡಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ವಕ್ಫ್ ಬೋರ್ಡ್‌ಗಳಿಗೆ ಅನಿಯಂತ್ರಿತ ಅಧಿಕಾರವನ್ನು ನೀಡಿದೆ. 1995 ರ ವಕ್ಫ್ ಕಾಯಿದೆ ತಿದ್ದುಪಡಿಯು ಆಸ್ತಿ ಹಕ್ಕುಗಳ ಮೇಲಿನ ಮೇಲ್ಮನವಿಗಳನ್ನು ಸಿವಿಲ್ ನ್ಯಾಯಾಲಯಗಳ ಬದಲಿಗೆ ವಕ್ಫ್ ನ್ಯಾಯಮಂಡಳಿಗಳಿಗೆ ವರ್ಗಾಯಿಸಿತು. 2013 ರ ತಿದ್ದುಪಡಿಯು ವಕ್ಫ್ ಬೋರ್ಡ್ ಅಧಿಕಾರವನ್ನು ಮತ್ತಷ್ಟು ವಿಸ್ತರಿಸಿ, ಯಾವುದೇ ಆಸ್ತಿಯನ್ನು ವಕ್ಫ್ ಎಂದು ಹೇಳುವ ಅಧಿಕಾರವನ್ನು ನೀಡಿತ್ತು. ಈಗ ಜಾರ್ಖಂಡ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಚುನಾವಣೆಗಳಿವೆ, ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದ ಭೂಮಿಯನ್ನು ವಕ್ಫ್ ಆಸ್ತಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಸ್ಲಿಮರನ್ನು ಮೆಚ್ಚಿಸುವ ಕೆಲಸದಲ್ಲಿದೆ. ಜನರು ಕಾಂಗ್ರೆಸ್ ಅನ್ನು ನಂಬುವುದನ್ನು ಮುಂದುವರೆಸಿದರೆ, ಕೃಷಿ ಭೂಮಿ ಮತ್ತು ದೇವಾಲಯಗಳು ಸೇರಿದಂತೆ ಹಿಂದೂಗಳ ಆಸ್ತಿಗಳನ್ನೂ ವಕ್ಫ್ ಆಸ್ತಿ ಎನ್ನುತ್ತಾರೆ.
ವಕ್ಫ್ ಭೂ ಕಬಳಿಕೆ ಬಗೆಗಿನ ಆತಂಕ ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ದಿನಗಳೆದಂತೆ ರಾಜ್ಯದ ಎಲ್ಲ ಜಿಲ್ಲೆಗಳ ರೈತರೂ ವಕ್ಫ್ ಸಂಬಂಧಿತ ನೋಟಿಸ್ ಪಡೆಯುತ್ತಿದ್ದಾರೆ. ಕಾಂಗ್ರೆಸ್ ತನ್ನ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಯಾವ ಹಂತಕ್ಕೂ ಹೋಗಲು ಹಿಂಜರಿಯುವುದಿಲ್ಲ ಎಂಬುದು ಅದೆಷ್ಟೋ ಸಂದರ್ಭಗಳಲ್ಲಿ ಸಾಬೀತು ಆಗಿರುವುದರಿಂದ ರಾಜ್ಯದ ರೈತರ ಬಳಿ ನನ್ನ ಮನವಿ ಏನೆಂದರೆ, ದಯವಿಟ್ಟು ತಮ್ಮ ಜಮೀನು, ಭೂ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ವಿನಂತಿಸುತ್ತೇನೆಂದು ಹೇಳಿದರು.
Advertisement