ಬೆಂಗಳೂರು: ರಾಜ್ಯದ ಉಪಸಮರದ ಪೈಕಿ ತೀವ್ರ ಕುತೂಹಲ ಕೆರಳಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆಗಮಿಸಲಿದ್ದು, ಎನ್'ಡಿಎ ಅಭ್ಯರ್ಥಿ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಕ್ಷೇತ್ರದಲ್ಲಿ ಮಂಗಳವಾರ ಪ್ರಚಾರ ನಡೆಸಲಿದ್ದಾರೆ.
ದೇವೇಗೌಡ ಅವರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರೊಂದಿಗೆ ಎನ್‌ಡಿಎ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕಿಳಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಲೋಕಸಭಾ ಚುನಾವಣೆ ವೇಳೆ ಪಕ್ಷದ ಅಳಿವು ಉಳಿವಿಗಾಗಿ ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು.
ದೇವೇಗೌಡರ ಪ್ರಚಾರ ಕುರಿತು ಮಾತನಾಡಿರುವ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು, ಅವರ ರಾಜಕೀಯದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, 92ರ ವಯಸ್ಸಿನಲ್ಲೂ ಅವರ ಫಿಟ್‌ನೆಸ್ ನೋಡಿದರೆ ಅಶ್ಚರ್ಯವನ್ನುಂಟು ಮಾಡುತ್ತದೆ. ಬೂತ್ ಮಟ್ಟದ ವಿಶ್ಲೇಷಣೆ ಮತ್ತು ದತ್ತಾಂಶ ಪರಿಶೀಲನೆ ಕುಳಿತಾಗ ತಜ್ಞರೂ ನಾಚಿಕೆಪಡುವಂತೆ ಮಾಡುತ್ತಾರೆ. ಅವರ ದೈಹಿಕ ಹಾಗೂ ಮಾನಸಿಕ ಸ್ಥೈರ್ಯ ನೋಡಿದರೆ ಆಶ್ಚರ್ಯವಾಗುತ್ತದೆ. ಆದರೆ, ಚನ್ನಪಟ್ಟಣದಲ್ಲಿ ಗೌಡರಿಗೆ ಹಲವು ಹಿತೈಷಿಗಳಿದ್ದರೂ ಇಲ್ಲಿ ಜೆಡಿಎಸ್ ಗೆಲುವುದು ಖಚಿತವಿಲ್ಲ ಎಂದು ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ನಿಖಿಲ್ ಕಣಕ್ಕಿಳಿದಾಗ ದೇವೇಗೌಡ ಅವರು ಪ್ರಚಾರ ನಡೆಸಿದ್ದರು. ಆದರೂ ಸೋಲನ್ನು ಅನುಭವಿಸಿದ್ದರು. ಇದಾಗ ಬಳಿಕ ದೇವೇಗೌಡರ ವರ್ಚಸ್ಸು ಕಡಿಮೆಯಾಗಿದೆ ಎಂದೆನಿಸುತ್ತಿದೆ ಎಂದು ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಜೆಡಿಎಸ್ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಎಂಎಲ್‌ಸಿ ಅಡಗೂರು ವಿಶ್ವನಾಥ್ ಅವರು ಮಾತನಾಡಿ, ಗೌಡರ ಪ್ರಚಾರ ನಿಖಿಲ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿಯವರು ಈಗಾಗಲೇ 2 ಚುನಾವಣೆಗಳಲ್ಲಿ ಸೋಲು ಕಂಡಿದ್ದು, ಸಂಬಂಧಿಯಾಗಿರುವ ಪ್ರಜ್ವಲ್ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಜನರು ಜೆಡಿಎಸ್ ಪಕ್ಷದ ಮೂರನೇ ತಲೆಮಾರನ್ನು ತಿರಸ್ಕರಿಸುತ್ತಿದ್ದಾರೆ. ಇದು ಕುಟುಂಬ ರಾಜಕೀಯವನ್ನು ಜನರು ತಿರಸ್ಕರಿಸುತ್ತಿರುವ ಸಂದೇಶವನ್ನು ನೀಡುತ್ತಿದೆ ಎಂದು ಮತ್ತೊಬ್ಬ ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.
ಇನ್ನು ನಿಖಿಲ್ ಪರ ಪ್ರಚಾರಕ್ಕಿಳಿಯುತ್ತಿರುವ ದೇವೇಗೌಡ ಅವರು ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಹೊರಟು, ಚನ್ನಪಟ್ಟಣದಲ್ಲಿ 4 ಕಡೆ ಪ್ರಚಾರ ನಡೆಸಲಿದ್ದಾರೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರಚಾರ ನಡೆಸಲಿದ್ದಾರೆ. ಮೊದಲಿಗೆ ವಿರುಪಾಕ್ಷಿಪುರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಈ ವೇಳೆ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎನ್'ಡಿಎ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಬಳಿಕ ಕೊಡಂಬಹಳ್ಳಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಮಧ್ಯಾಹ್ನ 2 ಗಂಟೆಯ ಬಳಿಕ ಜೆ.ಬ್ಯಾಡರಹಳ್ಳಿಯಲ್ಲಿ ಪ್ರಚಾರ ನಡೆಸಲಿದ್ದು, ನಂತರ ವೈ.ಟಿ.ಹಳ್ಳಿಯಲ್ಲಿ ಪ್ರಚಾರ ಕೈಗೊಂಡು ನಿಖಿಲ್ ಪರ ಮತಯಾಚಿಸಲಿದ್ದಾರೆಂದು ತಿಳಿದುಬಂದಿದೆ.
Advertisement