ಹಿರೇಬೆಂಡಿಗೇರಿ: ಶಿಗ್ಗಾಂವಿ ಉಪ ಚುನಾವಣೆಯ ಪ್ರಚಾರದ ಕಾವು ತಾರಕಕ್ಕೇರಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶಿಗ್ಗಾಂವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು.
ಬಸವರಾಜ ಬೊಮ್ಮಾಯಿ ಎಂಥಾ ಮನುಷ್ಯ ಅಂದ್ರೆ, ಲೋಕಸಭಾ ಚುನಾವಣೆಗೆ ನಾನು ಮಾತ್ರ ನಿಲ್ಲಲ್ಲ. ನನಗೆ ಟಿಕೇಟ್ ಬೇಕಾಗಿಲ್ಲ ಅಂತ ಹೇಳ್ತಾ ಹೇಳ್ತಾ ಅವರೇ ಟಿಕೆಟ್ ತಗೊಂಡು ಚುನಾವಣೆಗೆ ಸ್ಪರ್ಧಿಸಿದರು. ಈಗ ಉಪ ಚುನಾವಣೆಯಲ್ಲಿ ನನ್ನ ಮಗ ಸ್ಪರ್ಧಿಸಲ್ಲ, ನನ್ನ ಮಗನಿಗೆ ಟಿಕೇಟ್ ಕೇಳಲ್ಲಾ, ಕೇಳಲ್ಲಾ ಅನ್ನುತ್ತಲೇ ಭರತ್‌ಗೇ ಟಿಕೆಟ್ ತಂದರು. ಇದು ಬೊಮ್ಮಾಯಿ ಅವರ ಅವರ ಸ್ವಭಾವ. ಪ್ರಧಾನಿ ಮೋದಿ ಕುಟುಂಬ ರಾಜಕಾರಣ ಬಗ್ಗೆ ಉದ್ದುದ್ದ ಭಾಷಣ ಬಾರಿಸ್ತಾರೆ. ಆದರೆ, ಇಲ್ಲಿ ಎಸ್.ಆರ್ ಬೊಮ್ಮಾಯಿ ಅವರ ಮೊಮ್ಮಗ, ಬಸವರಾಜ ಬೊಮ್ಮಾಯಿ ಅವರ ಮಗನಿಗೆ ಟಿಕೆಟ್ ಕೊಟ್ಟಿದ್ದಾರೆ. ಹಾಗೆಯೇ ಕುಟುಂಬ ರಾಜಕಾರಣವನ್ನು ಬಿಟ್ಟು ಬೇರೇನೂ ಮಾಡದ ದೇವೇಗೌಡರು, ಹೆಚ್. ಡಿ. ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಅವರನ್ನು ಅಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನನ್ನ ಮತ್ತು ನನ್ನ ಪತ್ನಿ ವಿರುದ್ಧ ಷಡ್ಯಂತ್ರ ನಡೆಸಿ ಸುಳ್ಳು ಕೇಸು ಹಾಕಿಸಿದ್ದಾರೆ. ನಾಳೆ ಲೋಕಾಯುಕ್ತ ಪೊಲೀಸರ ಎದುರು ಸುಳ್ಳು ಕೇಸಿನ ಬಗ್ಗೆ ಹೇಳಿಕೆ ಕೊಡಬೇಕಾಗಿದೆ. ಇದಕ್ಕೆಲ್ಲಾ ಉತ್ತರ ಕೊಡಬೇಕು ಅಂದರೆ ಉಪ ಚುನಾವಣೆಯಲ್ಲಿ ಪಠಾಣ್ ಗೆಲ್ಲಿಸಿ. ಇಲ್ಲಿ ಪಠಾಣ್ ಗೆದ್ದರೆ ನನಗೆ ಶಕ್ತಿ ಬರುತ್ತದೆ. ಬಿಜೆಪಿಯ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಿದಂತಾಗುತ್ತದೆ ಎಂದು ಜನರಲ್ಲಿ ಮನವಿ ಮಾಡಿದರು.
ಬಿಜೆಪಿಯ ಲೂಟಿ ರವಿ ಇದ್ದಾರಲ್ಲ ಅವರು ನಾಡಿನ ಹಿಂದೂಗಳನ್ನು ಮುಸ್ಲಿಂಮರ ವಿರುದ್ಧ ಎತ್ತಿಕಟ್ಟಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರ ಉದ್ದೇಶ ಸಮಾಜ ಒಡೆಯುವುದು, ಆ ಮೂಲಕ ಅಸಮಾನತೆಯನ್ನು ಮುಂದುವರೆಸಿಕೊಂಡು ಹೋಗುವುದು. ಇಂದು ಸಮಾಜದಲ್ಲಿನ ಜಾತಿ ಪದ್ಧತಿ, ಅಸಮಾನತೆಗೆ ಸಂಘ ಪರಿವಾರದ ಮನಸ್ಥಿತಿಯ ಜನರೇ ಕಾರಣ. ಅಸಮಾನತೆಯನ್ನು ಸೃಷ್ಟಿಸಿ, ಪೋಷಿಸುತ್ತಿರುವವರು ಇವರೇ ಎಂದು ಸಿದ್ದರಾಮಯ್ಯ ಆರೋಪಿಸಿದರು.
Advertisement