ಬೆಂಗಳೂರು: ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ಉಪಚುನಾವಣೆಯ ಎನ್‌ಡಿಎ ಅಭ್ಯರ್ಥಿ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ವಿರುಪಾಕ್ಷಿಪುರ ಸೇರಿದಂತೆ ವಿವಿಧೆಡೆ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿದ ಅವರು, ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಸಹಾಯಕರಿಬ್ಬರ ನೆರವಿನಿಂದ ವೇದಿಕೆ ಏರಿ ಮಹಾರಾಜ ಕುರ್ಚಿಯಲ್ಲಿ ಆಸೀನರಾಗಿಯೇ ಭಾಷಣ ಮಾಡಿದರು. ಅವರ ಬಲಗೈನಲ್ಲಿ ಡ್ರಿಪ್ ಕ್ಯಾನಲ್ ಬ್ಯಾಂಡೇಜ್ ಎದ್ದು ಕಾಣುತ್ತಿತ್ತು.
ಉಪ ಚುನಾವಣೆ ಒಳ ರಾಜಕೀಯ ಏನೆಲ್ಲ ನಡೆದಿದೆ ಎಂಬುದು ನಿಮಗೆ ತಿಳಿದಿದೆ. ದೇವೇಗೌಡರ ಕೈ ನಡುಗುತ್ತವೆ, ಅವರು ಪ್ರಚಾರಕ್ಕೆ ಬರುತ್ತಾರಂತೆ ಎಂದು ಕನ್ವರ್ಟೆಡ್ ಕಾಂಗ್ರೆಸ್ ಜೆಂಟಲ್‌ಮ್ಯಾನ್ (ಸಿ.ಪಿ.ಯೋಗೇಶ್ವರ್) ಹೇಳುತ್ತಾರೆ. ನ.11ನೇ ತಾರೀಖಿನವರೆಗೆ ನಾನು ಪ್ರಚಾರಕ್ಕೆ ಬರುತ್ತೇನೆ. ನನ್ನ ಮೊಮ್ಮಗ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾನೆ. ಅವನಿಗೆ ನೀವು ಆಶೀರ್ವಾದ ಮಾಡಿ ಶಕ್ತಿ ತುಂಬಿ’ ಎಂದು ಮನವಿ ಮಾಡಿದರು. ಕಾಂಗ್ರೆಸ್ ನವರು ಹೇಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನನ್ನ ಕುಟುಂಬ ಬಿಟ್ಟರೆ ಮಾತನಾಡಲು ಬೇರೆ ವಿಷಯ ಇಲ್ಲ. ದೇವೇಗೌಡರೇ.. ಯಾಕೆ ನೀವು ನಿಮ್ಮ ಮೊಮ್ಮಗನನ್ನು ನಿಲ್ಲಿಸಿದ್ದೀರಿ ಎಂದು ಯಾರಾದರೂ ಕೇಳಬಹುದು. ಯಾವ ಕನ್ವರ್ಟಡ್ ಕಾಂಗ್ರೆಸ್ ನಾಯಕ ಇದ್ದಾರೋ, ಅವರಿಗೆ ಬಿಜೆಪಿಯಿಂದಲಾದರೂ ನಿಲ್ಲಿ, ಜೆಡಿಎಸ್ ನಿಂದಲಾದರೂ ನಿಲ್ಲಿ ಎಂದು ಹೇಳಿದ್ದೇವು. ಜೆಡಿಎಸ್- ಬಿಜೆಪಿಯವರಿಗೆ ಮೋಸ ಮಾಡಿ ಹೋದರು. ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಹೀಗಾಗಿ ಈ ಕುತಂತ್ರಕ್ಕೆ ಸೆಡ್ಡು ಹೊಡೆಯಲು ಸ್ಥಳೀಯ ಮುಖಂಡರು ಎಲ್ಲರೂ ಸೇರಿ ನಿಖಿಲ್ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು ಎಂದು ಹೇಳಿದರು.
ಡಿಕೆ ಸಹೋದರರನ್ನು 'ಅಪೂರ್ವ ಸಹೋದರರು' ಎಂದು ಟಾಂಗ್ ಕೊಟ್ಟು, ಆರು ತಿಂಗಳಿಂದ ಅಣಕದ ಮಾತು. ಯಾರು ಅಭ್ಯರ್ಥಿ ಅಂದರೆ ನಾನೇ.. ನಾನೇ...ನಾನೇ.. ನಾನೇ.. ಆ ನಾನೇ ಎನ್ನುತ್ತಿದ್ದವರು ಎಲ್ಲಿ ಹೋದರು ಈಗ? ಚನ್ನಪಟ್ಟಣಕ್ಕೆ ನಿಲ್ಲುವ ನಾನೇ.. ಇವಾಗ ಎಲ್ಲಿ ಹೋದಿರಿ? ಈಗ ಅಪೂರ್ವ ಸಹೋದರರು ತೀರ್ಮಾನ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ನಂತರ ಜಿ. ಬ್ಯಾಡರಹಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಎಚ್.ಡಿ ದೇವೇಗೌಡ ಮುಖ್ಯಮಂತ್ರಿಗೆ ಇರುವ ಗರ್ವದ ಸೊಕ್ಕನ್ನು ಮುರಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು. ಕಾಂಗ್ರೆಸ್ ನಾಯಕರು ಜನರಿಗೆ ಬರೀ ಸುಳ್ಳು ಹೇಳುತ್ತಿದ್ದಾರೆ. ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಎತ್ತಿನಹೊಳೆ ನೀರು ಕೋಲಾರಕ್ಕೆ ಬಂದರೆ ನಾನು ಇವರಿಗೆ ದೀರ್ಘದಂಡವಾಗಿ ನಮಸ್ಕಾರ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಲೇವಡಿ ಮಾಡಿದರು. ಡಿ.ಕೆ ಸಹೋದರರನ್ನು ‘ಅಪೂರ್ವ ಸಹೋದರರು’ ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಅವರನ್ನು ‘ಕನ್ವರ್ಟೆಡ್ ಕಾಂಗ್ರೆಸ್ ಜಂಟಲ್‌ಮನ್’ ಎಂದು ಟೀಕಿಸಿದರು. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜತೆಗೂಡಿ ನಿಖಿಲ್ ಪರವಾಗಿ ಪ್ರಚಾರ ನಡೆಸಿದರು.
Advertisement