ಬಳ್ಳಾರಿ: ಇನ್ನೂ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಸಿದ್ದರಾಮಯ್ಯ, ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಶೀಘ್ರದಲ್ಲೇ ರಾಜೀನಾಮೆ ನೀಡುತ್ತಾರೆ ಎನ್ನುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಇಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುತ್ತೇನೆ. ಇನ್ನೂ ಮೂರೂವರೆ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂದು ಹೇಳಿದರು.
ಸಣ್ಣ ತಪ್ಪು ಕೂಡ ಮಾಡದ ನನಗೆ ಕಳಂಕ ತರಲು ಬಿಜೆಪಿ ಸುಳ್ಳು ಕೇಸು ಹಾಕಿಸಿ ಷಡ್ಯಂತ್ರ ಮಾಡಿದೆ. ಬಿಜೆಪಿ ಷಡ್ಯಂತ್ರಕ್ಕೆ ತಕ್ಕ ಉತ್ತರ ಕೊಡಲು ಸಂಡೂರಿನಲ್ಲಿ ಅನ್ನಪೂರ್ಣಮ್ಮ ಗೆಲ್ಲಬೇಕು ಎಂದು ಸಿಎಂ ಕರೆ ನೀಡಿದರು.
ಈಗ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಯಶವಂತಪುರದ ಪುತ್ರ ಇ.ತುಕಾರಾಮ್ ಲೋಕಸಭಾ ಸದಸ್ಯರಾಗಿದ್ದಾರೆ. ಈಗ ಈ ಊರಿನ ಸೊಸೆ ಅನ್ನಪೂರ್ಣಮ್ಮ ಅವರನ್ನೂ ಗೆಲ್ಲಿಸಿ ಎಂದು ಮನವಿ ಸಿಎಂ ಮಾಡಿಕೊಂಡರು.
ಅನ್ನಪೂರ್ಣಮ್ಮ ಅವರು ಗೆದ್ದರೆ ನಾನೇ ಗೆದ್ದ ಹಾಗೆ. ಈ ಗೆಲುವಿನಿಂದ ನನಗೆ ಶಕ್ತಿ ಬರುತ್ತದೆ. ನಾನೇನು ತಪ್ಪು ಮಾಡದೆ ಇದ್ದರೂ ನನ್ನ ಮೇಲೆ ಸುಳ್ಳು ಕೇಸು ಹಾಕಿದ್ದಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಸಣ್ಣ ಕಳಂಕವೂ ನನ್ನ ಮೇಲಿಲ್ಲ. ಆದರೂ ಸುಳ್ಳು ಕೇಸು ಹಾಕಿಸಿದ್ದಾರೆ. ಈ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು ಅಂದರೆ ಇಲ್ಲಿ ಅನ್ನಪೂರ್ಣಮ್ಮ ಅವರನ್ನು ನೀವು ಗೆಲ್ಲಿಸಿಕೊಡಿ ಎಂದರು.
Advertisement