ಬೆಂಗಳೂರು: ಅನುದಾನ ಬೇಕಾದರೆ ನನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು – ಡಿಸಿಎಂ ಸಾಹೇಬರ ಲೇಟೆಸ್ಟ್ ನುಡಿಮುತ್ತುಗಳು. ಡಿಕೆ ಶಿವಕುಮಾರ್ ಅವರೇ, ನಿಮ್ಮ ಬಳಿ ತಗ್ಗಿ-ಬಗ್ಗಿ ಇರಬೇಕು ಅನ್ನುವುದಕ್ಕೆ ಬೆಂಗಳೂರು ನಗರವನ್ನು ನಿಮ್ಮ ಜಹಗೀರು ಅಂದುಕೊಡಿದ್ದೀರಾ? ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಧಿಕಾರ ಎನ್ನುವುದು ಮತದಾರರು ಕೊಟ್ಟಿರುವ ಭಿಕ್ಷೆ, ಸಂವಿಧಾನ ಕೊಟ್ಟಿರುವ ಜವಾಬ್ದಾರಿಯೇ ಹೊರತು ಪಾಳೆಗಾರಿಕೆ ಅಲ್ಲ. ಪ್ರಜಾಪ್ರಭುತ್ವದಲ್ಲಿ ನಾವು ತಗ್ಗಿ-ಬಗ್ಗಿ ನಡೆಯಬೇಕಿರುವುದು ಮತಭಿಕ್ಷೆ ನೀಡಿರುವ ಮತದಾರ ಪ್ರಭುಗಳಿಗೆ, ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಸಂವಿಧಾನಕ್ಕೆ ಹೊರತು ಯಾವ ದೊಣ್ಣೆ ನಾಯಕನಿಗೂ ಅಲ್ಲ’ ಎಂದು ಅಶೋಕ್ ತಿರುಗೇಟು ನೀಡಿದ್ದಾರೆ. ಈ ನಿಮ್ಮ ಒಣ ಪ್ರತಿಷ್ಠೆ, ಧಿಮಾಕು, ದರ್ಬಾರು ಎಲ್ಲ ಬಿಟ್ಟು ಜನರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ. ಯಾವುದೇ ಕ್ಷೇತ್ರದ ಬಗ್ಗೆ ತಾರತಮ್ಯ ಮಾಡದೆ ಸಚಿವರಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ನೀಡುವಾಗ ಜಯನಗರವನ್ನು ಹೊರಗಿಟ್ಟಿರುವ ವಿಚಾರ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಸಂಸದ ತೇಜಸ್ವಿ ಸೂರ್ಯ ಪ್ರಸ್ತಾಪಿಸಿದ್ದರು. ಈ ಸಂದರ್ಭದಲ್ಲಿ ಡಿಸಿಎಂ ನೀಡಿದ್ದ ತಗ್ಗಿ-ಬಗ್ಗಿ ನಡೆಯಬೇಕೆಂಬ ಹೇಳಿಕೆ ಈಗ ಆಕ್ಷೇಪಕ್ಕೆ ಗುರಿಯಾಗಿತ್ತು.ಇನ್ನೂ ಅಶೋಕ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್ ನಾನು ಮಾತನಾಡಿದ್ದು ತೇಜಸ್ವಿ ಸೂರ್ಯ ಜೊತೆ, ಅಶೋಕ್ ಏಕೆ ಮಧ್ಯದಲ್ಲಿ ಬರುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
Advertisement