ಬಳ್ಳಾರಿ: ರೈತರಿಗೆ, ಮಠ, ಮಂದಿರಗಳಿಗೆ ಸೇರಿದ ಜಮೀನುಗಳ ಮಾಲೀಕತ್ವವನ್ನು ಕಬಳಿಸಲು ವಕ್ಫ್ ಬೋರ್ಡ್ ಮೂಲಕ ರಾಜ್ಯದಲ್ಲಿ ಹೊಸ ರೀತಿಯ "ಜಿಹಾದ್" ಆರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶುಕ್ರವಾರ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ, ಕಾಂಗ್ರೆಸ್ ಸರ್ಕಾರದ ಮುಸ್ಲಿಮರ ತುಷ್ಟೀಕರಣ ಮತ್ತಷ್ಟು ಹೆಚ್ಚುತ್ತಿದೆ. ಅಲ್ಪಸಂಖ್ಯಾತರ ಓಲೈಕೆಯೇ ತನ್ನ ಗುರಿಯನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದರು.
"ರಾಜ್ಯದಾದ್ಯಂತ ವಕ್ಫ್ ಮೂಲಕ ಹೊಸ ರೀತಿಯ ಜಿಹಾದ್ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯನವರ ನಡವಳಿಕೆಯನ್ನು ನೋಡಿದರೆ ಅವರು ಕಪಟಿಗಳು" ಎಂದು ಜೋಶಿ ವಾಗ್ದಾಳಿ ನಡೆಸಿದರು.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಿಸುವುದಾಗಿ ಭರವಸೆ ನೀಡಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ.
"ಹೌದು. ಸಿಎಂ ಸಿದ್ದರಾಮಯ್ಯ ಹೇಳಿದಂತೆ ಬಿಜೆಪಿ ವಕ್ಫ್ ಆಸ್ತಿ ಸಂರಕ್ಷಣೆ ಮಾಡಲು ಬದ್ಧವಿದೆ. ನಾವು ಹೇಳಿರುವುದು ಅಸ್ತಿತ್ವದಲ್ಲಿರುವ ವಕ್ಫ್ ಆಸ್ತಿಗಳು ಮತ್ತು ಕಾಂಗ್ರೆಸ್ ಹಿರಿಯ ನಾಯಕರಿಂದ ಅತಿಕ್ರಮಣ ಮತ್ತು ಲೂಟಿ ಮಾಡಿದ ಆಸ್ತಿ ರಕ್ಷಣೆ. ಕಾಂಗ್ರೆಸ್ ಹಿರಿಯ ಮುಖಂಡ ಅನ್ವರ್ ಮಾನಪ್ಪಾಡಿ ತನ್ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಕಮರುಲ್ ಇಸ್ಲಾಂ, ರೆಹಮಾನ್ ಖಾನ್, ಎನ್.ಎ.ಹ್ಯಾರಿಸ್, ಜಾಫರ್ ಶರೀಫ್ ಅವರೇ ಲೂಟಿ ಮಾಡಿದ್ದಾರೆ. ಹಾಗಾಗಿ ನಾವು ವಕ್ಫ್ ಆಸ್ತಿಯನ್ನು ಸಂರಕ್ಷಿಸುತ್ತೇವೆ ಎಂದು ತಿಳಿಸಿದ್ದೇವೆ ಎಂದು ತಿರುಗೇಟು ನೀಡಿದರು.
"ನಾವು ಆ ಜಮೀನುಗಳನ್ನು ರಕ್ಷಿಸುತ್ತೇವೆ ಎಂದು ಹೇಳಿದ್ದೆವು, ನೀವು(ಕಾಂಗ್ರೆಸ್ ಸರ್ಕಾರ) ಈಗ ಏನು ಮಾಡುತ್ತಿದ್ದೀರಿ? ಮಠಗಳು ಮತ್ತು ದೇವಸ್ಥಾನಗಳ ಭೂಮಿಯನ್ನು ವಕ್ಫ್ ಬೋರ್ಡ್ ಗೆ ಸೇರಿಸುತ್ತಿದ್ದೀರಿ. ನಾನು ಸಿದ್ದರಾಮಯ್ಯ ಅವರನ್ನು ಕೇಳುತ್ತೇನೆ, ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ?" "ಇದೊಂದು ದೊಡ್ಡ ಷಡ್ಯಂತ್ರ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ, ದೇಶ ಮುಖ್ಯವಲ್ಲ, ಭಯೋತ್ಪಾದಕರ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಂದೂ ಸಂಘಟನೆ, ಹಿಂದೂಗಳ ಮೇಲೆ ಹಲ್ಲೆ ನಡೆದರೆ ಕಾಂಗ್ರೆಸ್ ನವರಿಗೆ ಏನೂ ಅನಿಸುವುದಿಲ್ಲ. ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ಅಧಿಕಾರಿ ಹೇಳುವಂತೆ ಹಲವಾರು ಪೊಲೀಸ್ ಅಧಿಕಾರಿಗಳ ಜೀವ ಹೋಗುತ್ತಿತ್ತು. ಅಂತಹ ಘಟನೆಯಲ್ಲಿ ಯುಎಪಿಎ ಕಾನೂನಿನಡಿ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದಲ್ಲೂ ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದರೂ, ಆ ಪ್ರಕರಣಗಳನ್ನು ಸಹ ಹಿಂಪಡೆಯುವ ಪ್ರಯತ್ನಗಳು ಸಹ ಸರ್ಕಾರದಲ್ಲಿ ನಡೆಯುತ್ತಿವೆ ಎಂದು ಪ್ರಹ್ಲಾದ ಜೋಷಿ ತಿಳಿಸಿದರು.
Advertisement