ಮೈಸೂರು: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ನಡೆಯಲಿರುವ ಉಪ ಚುನಾವಣೆ ರಾಜ್ಯದ ಮೂರು ದೊಡ್ಡ ರಾಜಕೀಯ ಪಕ್ಷಗಳಿಗೆ ನಿಜಕ್ಕೂ ಪ್ರತಿಷ್ಠೆಯ ವಿಷಯವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಹಗರಣ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಸವಾಲಾಗಿದೆ.
ಹಳೆ ಮೈಸೂರು ಭಾಗದ ಚನ್ನಪಟ್ಟಣದಲ್ಲಿ ದೇವೇಗೌಡರ ಕುಟುಂಬ ಹಾಗೂ ಡಿಕೆಶಿ ಸಹೋದರರ ನಡುವೆ ಹೈವೋಲ್ಟೇಜ್ ಕದನ ಏರ್ಪಟ್ಟಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹಾಗೂ ರಾಜ್ಯ ಜೆಡಿಎಸ್ ಮುಖ್ಯಸ್ಥ ಹೆಚ್.ಡಿ.ಕುಮಾರಸ್ವಾಮಿ ಅವರು ಒಂದು ಕಡೆಯಾದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ, ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಕಾಂಗ್ರೆಸ್ ನಿಂದ ಈ ಉಪ ಚುನಾವಣೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ಹಾಗೂ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಎನ್‌ಡಿಎ ಕಣಕ್ಕಿಳಿಸಿದರೆ, ಕಾಂಗ್ರೆಸ್ ಬಿಜೆಪಿಯಿಂದ ಬಂದ ಮಾಜಿ ಶಾಸಕ ಸಿಪಿ ಯೋಗೇಶ್ವರ ಅವರನ್ನು ಕಣಕ್ಕಿಳಿಸಿದೆ. ಈ ಭಾಗದ ಪ್ರಮುಖ ಸಮುದಾಯವಾದ ಒಕ್ಕಲಿಗ ನಾಯಕತ್ವದ ಪಟ್ಟ ಪಡೆಯಲು ಚನ್ನಪಟ್ಟಣ ಗೆಲ್ಲಲು ಗೌಡರ ಕುಟುಂಬ ಹಾಗೂ ಡಿಕೆಶಿ ಬ್ರದರ್ಸ್ ತೀವ್ರ ಜಿದ್ದಾಜಿದ್ದಿಗೆ ಇಳಿದಿದ್ದಾರೆ.
ಮೊಮ್ಮಗ ನಿಖಿಲ್ ಗೆಲ್ಲಲು 92 ವರ್ಷದ ದೇವೇಗೌಡರೇ ಪ್ರಚಾರಕ್ಕಿಳಿದಿದ್ದು, ಅವರಿಗೆ ಬಿಜೆಪಿ ಪ್ರಬಲ ನಾಯಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಾಥ್ ನೀಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸೋತ ನಂತರ ನಿಖಿಲ್ ಅವರ ಮೂರನೇ ಚುನಾವಣಾ ಹೋರಾಟ ಇದಾಗಿದೆ. ನಿಖಿಲ್ ಅವರ ಎದುರಾಳಿ ಯೋಗೇಶ್ವರ ಅವರು ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದರು.
ಉತ್ತರ ಕರ್ನಾಟಕದ ಶಿಗ್ಗಾಂವಿಯಲ್ಲಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರ ಭರತ್ ಬೊಮ್ಮಾಯಿ ಅವರ ಗೆಲುವಿಗಾಗಿ ಮಾತ್ರವಲ್ಲದೆ ತಮ್ಮ ತವರು ನೆಲದಲ್ಲಿ ಹಿಡಿತ ಉಳಿಸಿಕೊಳ್ಳಲು ಮತ್ತು ಬಿಜೆಪಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲು ಪ್ರಚಾರ ಮಾಡುತ್ತಿದ್ದಾರೆ. ಭರತ್ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಬಳ್ಳಾರಿಯ ಸಂಡೂರು ಕ್ಷೇತ್ರದಲ್ಲಿ ಸಂಸದ ಇ ತುಕಾರಾಂ ತಮ್ಮ ಪತ್ನಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪರ ಪ್ರಚಾರ ನಡೆಸುತ್ತಿದ್ದಾರೆ. ಗಣಿಗಾರಿಕೆ ಪ್ರದೇಶವಾದ ಸಂಡೂರಿನ ಕದನ ತುಕಾರಾಮ್‌ಗೆ ತೀವ್ರ ಪೈಪೋಟಿಯಾಗಿದೆ, ರಾಜಕೀಯವಾಗಿ ಅವರಿಗೆ ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಮತ್ತು ಬಿ ಶ್ರೀರಾಮುಲು ಠಕ್ಕರ್ ಕೊಡಲು ನೋಡುತ್ತಿದ್ದಾರೆ. ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ ಸುಮಾರು ಒಂದು ದಶಕದ ನಂತರ ಬಳ್ಳಾರಿ ಪ್ರದೇಶದಲ್ಲಿ ರೆಡ್ಡಿ ಅವರ ನಾಯಕತ್ವ ಮತ್ತೆ ಬರಲಿದೆ.
ಮುಡಾ ಮತ್ತು ಎಸ್‌ಟಿ ಕಾರ್ಪೊರೇಷನ್ ಹಗರಣದಿಂದ ವಿವಾದಕ್ಕೆ ಸಿಲುಕಿರುವ ಸರ್ಕಾರದ ಮೇಲೆ ಪ್ರತಿಪಕ್ಷ ಜೆಡಿಎಸ್ ಮತ್ತು ಬಿಜೆಪಿಯಿಂದ ನಿರಂತರ ದಾಳಿಗೆ ಒಳಗಾಗಿರುವ ಸಮಯದಲ್ಲಿ ಉಪ ಚುನಾವಣೆಯಲ್ಲಿ ಸೋಲು ಕಂಡರೆ ಸಿಎಂ ಸಿದ್ದರಾಮಯ್ಯ ಮತ್ತು ಅವರ ನಾಯಕತ್ವಕ್ಕೆ ಹಿನ್ನಡೆಯುಂಟಾಗಬಹುದು.
ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದರೂ ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಆಗ್ರಹಿಸುತ್ತಿವೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಜನಾಭಿಪ್ರಾಯ ಎಂದು ಪರಿಗಣಿಸಲಾಗುವುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಿಎಂ ಆಗಬೇಕೆಂಬ ಆಕಾಂಕ್ಷೆಯಲ್ಲಿ ಹಲವರಿದ್ದಾರೆ. ಹೀಗಾಗಿ ಉಪ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತರಬಹುದು, ಇದು ಆಡಳಿತದ ಮೇಲೆ ಪರಿಣಾಮ ಬೀರಬಹುದು ಮತ್ತು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ ಸ್ಥಾನವನ್ನು ದುರ್ಬಲಗೊಳಿಸಬಹುದು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಕೈಬಿಟ್ಟಿರುವ ಒಕ್ಕಲಿಗರು ಮತ್ತೊಮ್ಮೆ ಬೆಂಬಲ ನೀಡುತ್ತಿದ್ದಾರೆ ಎಂಬ ಬಲವಾದ ಸಂದೇಶವನ್ನು ರವಾನಿಸುತ್ತದೆ, ಇದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಅವರಿಗೆ ಸಾಕಷ್ಟು ಬಲ ತುಂಬುತ್ತದೆ.
ಉಪಚುನಾವಣೆಗಳು ಅಸೆಂಬ್ಲಿಯಲ್ಲಿನ ಕಾಂಗ್ರೆಸ್ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ (ಅದು 136 ಶಾಸಕರನ್ನು ಹೊಂದಿದೆ), ಎಲ್ಲಾ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಸಿದ್ದರಾಮಯ್ಯನವರ ಸ್ಥಾನವನ್ನು ಕೇವಲ ಸಿಎಂ ಆಗಿ ಮಾತ್ರವಲ್ಲದೆ ಅವರ ಪಕ್ಷದೊಳಗೆಯೂ ಭದ್ರಪಡಿಸುತ್ತದೆ. ಗೆಲುವು ಎಂದರೆ ಸಿದ್ದರಾಮಯ್ಯನವರು ತಮ್ಮ ಸಾಂಪ್ರದಾಯಿಕ ಅಹಿಂದ ಮತದಾರರ ಜೊತೆಗೆ ಒಕ್ಕಲಿಗರು ಮತ್ತು ಲಿಂಗಾಯತರ ಬೆಂಬಲವನ್ನು ಹೊಂದಿದ್ದಾರೆ ಎಂದು ಹೇಳಿಕೊಳ್ಳಬಹುದು.
ಇನ್ನು ಎನ್ ಡಿಎ ಮೈತ್ರಿಕೂಟ ವಿಚಾರಕ್ಕೆ ಬಂದರೆ, ಕಾಂಗ್ರೆಸ್ ಗೆದ್ದರೆ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಮೂಡಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
Advertisement