ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳಿದ್ದ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ನಾಯಕರು ಇದೀಗ ಈ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಪರಿಗಣಿಸಲ್ಪಟ್ಟಿರುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ರಂಗ ಪ್ರವೇಶಿಸಿದ್ದಾರೆ. ತಮ್ಮ ಮೊಮ್ಮಗ ಮತ್ತು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ವ್ಯಾಪಕ ಪ್ರಚಾರ ನಡೆಸುತ್ತಿರುವುದು ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿ ಒಕ್ಕಲಿಗ ಶಾಸಕರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಜಾಗರೂಕರಾಗಿದ್ದಾರೆ, ಏಕೆಂದರೆ ಅವರಲ್ಲಿ ಹೆಚ್ಚಿನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವದಿಂದ ಅಹಿಂದ ಮತದಾರರ ಬೆಂಬಲದೊಂದಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವಾರ ಶಾಸಕರಾದ ಮಾಗಡಿಯ ಹೆಚ್.ಸಿ.ಬಾಲಕೃಷ್ಣ, ಅರಸೀಕೆರೆಯ ಕೆ.ಎಂ.ಶಿವಲಿಂಗೇಗೌಡ, ಮಾಜಿ ಶಾಸಕ ಎಂ.ಸಿ.ಅಶ್ವಥ್ ಅವರು ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಅವರಿಗೆ ಮತ ಹಾಕುವಂತೆ ಪ್ರಚಾರ ಮಾಡಿದ್ದರು. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆದ್ದರೆ ಶಿವಕುಮಾರ್ ಅವರನ್ನು ಸಿಎಂ ಗದ್ದುಗೆಗೆ ಏರಿಸಬಹುದೆಂಬ ಕಾರಣಕ್ಕೆ ಕ್ಷೇತ್ರದಲ್ಲಿ ಭಾರೀ ಪ್ರಚಾರ ನಡೆಸಿದ್ದರು. ಯೋಗೇಶ್ವರ ಪರ ಒಕ್ಕಲಿಗ ಸಮುದಾಯದ ಮತಗಳನ್ನು ಧ್ರುವೀಕರಿಸಲು ತಂತ್ರ ರೂಪಿಸಲಾಗಿತ್ತು ಎನ್ನಲಾಗಿದೆ. ಆದರೆ, ಶಿವಕುಮಾರ್ ಅವರ ರಾಜಕೀಯ ಭವಿಷ್ಯದೊಂದಿಗೆ ಚನ್ನಪಟ್ಟಣಕ್ಕೆ ಸಂಬಂಧ ಕಲ್ಪಿಸಿರುವುದು, ಹಿಂದುಳಿದ ವರ್ಗಗಳ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಯಿಂದ ಬೇರೆಡೆಗೆ ತಿರುಗಿಸಲು ಪ್ರತಿಸ್ಪರ್ಧಿ ಪಾಳೆಯದ ಸಂಚು ಎಂದು ಬಾಲಕೃಷ್ಣ ಗುರುವಾರ ಆರೋಪಿಸಿದರು. ಮಾಧ್ಯಮಗಳು ಕೂಡ ಈ ವಿಷಯವನ್ನು ತಪ್ಪಾಗಿ ಅರ್ಥೈಸಿವೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.
Advertisement