ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಈ ಸರ್ಕಾರವನ್ನು ತೆಗೆದುಹಾಕುವವರೆಗೂ ವಿರಮಿಸುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ಚನ್ನಪಟ್ಟಣ ಕ್ಷೇತ್ರದ ರಾಂಪುರ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಈ ಸರ್ಕಾರದ ಬಗ್ಗೆ ನಾನು ಯಾವಾಗಲೂ ಮಾತಾಡಿರಲಿಲ್ಲ. ಇವರ ಲೂಟಿ ನೋಡಲಾರದೆ ನಿನ್ನೆಯಿಂದ ಮಾತನಾಡುತ್ತಿದ್ದೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನಾಯಕತ್ವವನ್ನು ಶ್ಲಾಘಿಸಿದ ಮಾಜಿ ಪ್ರಧಾನಿ, ಇಂಡಿಯಾ ಮೈತ್ರಿಕೂಟದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕೊನೆಯ ಉಸಿರು ಇರುವವರೆಗೂ ನಾನು ರಾಜಕೀಯದಲ್ಲಿ ಹೋರಾಡುತ್ತೇನೆ ಎಂದು ಹೇಳಿದರು.
ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಚುನಾವಣಾ ಕಣಕ್ಕಿಳಿದಿರುವ ಕಾರಣ ಇಳಿ ವಯಸ್ಸಿನಲ್ಲೂ ಪ್ರಚಾರಕ್ಕೆ ಬಂದಿದ್ದಾರೆ ಎನ್ನುವುದು ತಪ್ಪು. ನಾನು ಮುಂದಿನ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಹೋರಾಟ ಮಾಡುತ್ತೇನೆ ಎಂದರು.
ಅಂಬೇಡ್ಕರ್ ಹೆಸರು ಹೇಳುತ್ತಿರುವ ಇಬ್ಬರು ಮಹಾನ್ ನಾಯಕರು ರಾಜ್ಯವನ್ನು ಆಳುತ್ತಿದ್ದಾರೆ. ಅವರ 5 ಗ್ಯಾರಂಟಿಗಳ ಪೈಕಿ 4ನೇ ಗ್ಯಾರಂಟಿ ಅಲ್ಲಾಡುತ್ತಿವೆ. ಇದನ್ನು ನಾನು ಹೇಳುತ್ತಿಲ್ಲ. ಅವರದೇ ಸಂಪುಟದ ಸಚಿವರು ಹೇಳುತ್ತಿದ್ದಾರೆ. ಖಜಾನೆಯಲ್ಲಿ ಏಕೆ ಕಾಸು ಇಲ್ಲವಾ. ಈ ಸರ್ಕಾರದಲ್ಲಿ ಎಲ್ಲರು ತಿಂದು ತೆಗುತ್ತಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣವನ್ನು ಎತ್ತಿ ತೋರಿಸಿದ ಅವರು, ವಾಲ್ಮೀಕಿ ಸಮುದಾಯದ ಹಣವನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ, ತೆಲಂಗಾಣ ವಿಧಾನಸಭೆ ಚುನಾವಣೆಗೆ ತೆಗೆದುಕೊಂಡು ಹೋಗಿದೆ ಎಂದು ಆರೋಪಿಸಿದರು.
ಶಿವಕುಮಾರ್ ಅವರು ಈ ವರ್ಷದ ಆರಂಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹಣಬಲ ಬಳಸಿ ಮಂಡ್ಯದಲ್ಲಿ ತಮ್ಮ ಪುತ್ರ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರನ್ನು ಸೋಲಿಸಲು ಯತ್ನಿಸಿದರು ಎಂದು ದೇವೇಗೌಡರು ಆರೋಪಿಸಿದರು.
“ಈ ಸರ್ಕಾರ ತೊಲಗುವವರೆಗೆ ಹೋರಾಟ ಮಾಡುತ್ತೇನೆ... ನನ್ನ ವಯಸ್ಸು 92. ನನ್ನ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆದ್ದ ನಂತರ ನಾನು ಮನೆಯಲ್ಲಿ ಮಲಗುತ್ತೇನೆ ಎಂದಲ್ಲ. ಇಲ್ಲ ನನ್ನ 62 ವರ್ಷಗಳಲ್ಲಿ ಇಂತಹ ಸರ್ಕಾರವನ್ನು ನಾನು ನೋಡಿಲ್ಲ. ನಾವು ಈ ರಾಜ್ಯವನ್ನು ಉಳಿಸಬೇಕಾಗಿದೆ. ನಾನು ಈ ಸರ್ಕಾರ ತೆಗೆಯಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ” ಎಂದು ಮಾಜಿ ಪ್ರಧಾನಿ ಹೇಳಿದರು.
ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಮೋದಿಗೆ ಸಮಾನವಾದ ಒಬ್ಬ ನಾಯಕ ಇಲ್ಲದ ಕಾರಣ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಎನ್‌ಡಿಎ ಸೇರಿದೆ ಎಂದು ದೇವೇಗೌಡ ಹೇಳಿದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದಿರುವ ಬಗ್ಗೆ ಮಾತನಾಡಿದ ದೇವೇಗೌಡರು, ಮೋದಿ ಮತ್ತು ಟ್ರಂಪ್ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಮತ್ತು ಇದು ದೇಶದ ಆರ್ಥಿಕ ಪ್ರಗತಿಯಲ್ಲಿ ಮತ್ತು "ಚೀನಾ ಮತ್ತು ಇತರ ವಿರೋಧಿಗಳನ್ನು" ಎದುರಿಸಲು ಪ್ರಯೋಜನಕಾರಿಯಾಗಲಿದೆ ಎಂದರು.
ಚನ್ನಪಟ್ಟಣ ಉಪಚುನಾವಣೆಯನ್ನು ‘ಡಿಕೆ’(ಶಿವಕುಮಾರ್) ಮತ್ತು ‘ಎಚ್‌ಡಿಕೆ’(ಎಚ್‌ಡಿ ಕುಮಾರಸ್ವಾಮಿ) ನಡುವಿನ ಹೋರಾಟ ಎಂದು ಬಿಂಬಿಸುತ್ತಿರುವ ಮಾಧ್ಯಮಗಳ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ಅವರ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ ಎಂದರು.
ಜನರಿಗೆ ಅನುಕೂಲವಾಗಲಿ ಎಂದು ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆ ಮಾಡಿದರು. ಆದರೆ ಅವರು ತಮಗೆ ಅನುಕೂಲವಾಗಲಿ ಎಂದು ಬೆಂಗಳೂರಿಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು(ಡಿಕೆ) ಕುಮಾರಸ್ವಾಮಿಯೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಜೆಡಿಎಸ್ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದರೂ ಪ್ರಧಾನಿ ಮೋದಿ ಅವರು ಕೇಂದ್ರದಲ್ಲಿ ಎರಡು ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ಕುಮಾರಸ್ವಾಮಿಯವರಿಗೆ ನೀಡಿದ್ದಾರೆ. ಅಂತಹ ಜವಾಬ್ದಾರಿಯನ್ನು ಪಡೆಯುವ ವ್ಯಕ್ತಿತ್ವವನ್ನು ಕುಮಾರಸ್ವಾಮಿ ಬೆಳೆಸಿಕೊಂಡಿದ್ದಾರೆ ಎಂದರು.
ಚುನಾವಣಾ ಪ್ರಚಾರದ ವೇಳೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದಕ್ಕಾಗಿ ಮೊಮ್ಮಗ ಮತ್ತು ಮಗನನ್ನು ಟೀಕಿಸಿದ ಶಿವಕುಮಾರ್ ಮತ್ತು ಇತರ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, "ಡಿಕೆ ಕಣ್ಣೀರು ಹಾಕುವುದನ್ನು ಯಾರಾದರೂ ನೋಡಿದ್ದೀರಾ?" ನೂರು ರೂಪಾಯಿಗೆ ಕೊತ್ವಾಲ್ ರಾಮಚಂದ್ರ(ದರೋಡೆಕೋರ) ಜೊತೆ ಕೆಲಸ ಮಾಡಲು ಆರಂಭಿಸಿರುವ ಅವರು(ಶಿವಕುಮಾರ್) ಪಂಡಿತ್ ನೆಹರು ಮತ್ತು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರು ಎಂದಾದರೂ ಕಣ್ಣೀರು ಹಾಕಿದ್ದಾರೆಯೇ? ನನಗೆ ತೋರಿಸಿ'' ಎಂದರು.
ಇನ್ನು ರಾಮನಗರದಲ್ಲಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮಾಜಿ ಸಿಎಂ, ಮಾಜಿ ಪ್ರಧಾನಿ ಪುತ್ರ, ನಾನು ಬಡ ರೈತನ ಮಗ, ನನ್ನ ಮತ್ತು ಕುಮಾರಸ್ವಾಮಿ ನಡುವೆ ಹೋಲಿಕೆ ಸಾಧ್ಯವಿಲ್ಲ. "ಅವರು (ಕುಮಾರಸ್ವಾಮಿ) ಹಿಮಾಲಯ, ನಾನು ಜನರ ಪ್ರಾಮಾಣಿಕ ಸೈನಿಕ" ಎಂದು ಹೇಳಿದರು.
ಸರ್ಕಾರವನ್ನು ತೆಗೆದುಹಾಕುವ ಕುರಿತ ದೇವೇಗೌಡರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್".... ಇದು ಸುಲಭವಾಗಿ ತೆಗೆಯುವ ಕಡಲೆ ಗಿಡವಲ್ಲ.... ಇದು 136 ಶಾಸಕರ ಬಲಿಷ್ಠ ಸರ್ಕಾರವಾಗಿದೆ. ಇದು ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದೆ" ಎಂದು ತಿರುಗೇಟು ನೀಡಿದರು.
Advertisement