ಬೆಂಗಳೂರು: ಹಾವೇರಿ ರೈತ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಟ್ವೀಟ್ ವಾರ್ ಜೋರಾಗಿ ನಡೆಯುತ್ತಿದೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾವೇರಿಯ ರೈತನ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ವಕ್ಫ್ ಬೋರ್ಡ್ ನೋಟಿಸ್ ಕಳುಹಿಸಿದ್ದರಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ ಇದು ಸುಳ್ಳು ಸುದ್ದಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಪೊಲೀಸರು ತಪ್ಪು ಮಾಹಿತಿ ಹಬ್ಬಿಸಿದ ಆರೋಪದ ಮೇಲೆ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಹಾವೇರಿ ಪ್ರಕರಣದಲ್ಲಿ ಎಫ್ ಐಆರ್ ದಾಖಲಾದ ಕಾರಣಕ್ಕೆ ಸಂಸದ ತೇಜಸ್ವಿ ಸೂರ್ಯ ಅಳುವುದೇಕೆ? ಸುಳ್ಳು ಸುದ್ದಿ ಹಬ್ಬಿಸುತ್ತಿರುವ ನಿಮಗೆ ಮೆರವಣಿಗೆ ಮೂಲಕ ಸನ್ಮಾನ ಮಾಡಬೇಕಾ? ಸುಳ್ಳು ಹೇಳಿದ ಮೇಲೆ ಅದಕ್ಕೆ ಪ್ರಾಯಶ್ಚಿತವಾಗಬೇಕಲ್ಲವೇ? ನಾನು ಜಾಲತಾಣದ ಪೋಸ್ಟ್ ಮಾಡಿದ್ದೇನೆ ಎಂದು ಈಗ ಅಳುತ್ತಾ ಕೂತರೆ ಏನು ಪ್ರಯೋಜನ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಕೊಂಡಿರುವ ಪ್ರಿಯಾಂಕ್ ಖರ್ಗೆHey Child ತೇಜಸ್ವಿ ಸೂರ್ಯ ನೀವು ಸರಿಯಾಗಿದ್ದರೆ ನೀವು ಟ್ವೀಟ್ ಅನ್ನು ಏಕೆ ಅಳಿಸಿದ್ದೀರಿ? ದಯವಿಟ್ಟು ರೈತರ ಕುಟುಂಬದ ಹೇಳಿಕೆಯನ್ನು ಎಚ್ಚರಿಕೆಯಿಂದ ಓದಿ. ರೈತನಿಗೆ ಸೇರಿದ ಸರ್ವೆ ನಂ. 31/2A ನಲ್ಲಿ ಸಾಲ ಪಡೆದಿದ್ದಾನೆ, ಅದು WAQF ಗೆ ಸೇರಿದ್ದ ಭೂಮಿ ಅಲ್ಲ, ಅಲ್ಲ, ನೀವು ಸುಮ್ಮನೆ ಕಿರುಚಿದ್ದೀರಿ, ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಆಡಳಿತಾವಧಿಯಲ್ಲಿ ಹಾವೇರಿಯಲ್ಲಿ ಈ ಸಾಲದ ಒತ್ತಡಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಎಫ್ ಐಆರ್ ಹಾಕಿಸುವುದೇ ಪ್ರಿಯಾಂಕ್ ಖರ್ಗೆ ಕೆಲಸ ಎಂದು ಹೇಳುತ್ತೀರಾ. ನಾನು ಇದುವರೆಗೂ ಅವರ ಮೇಲೆ, ಅವರ ಶಾಸಕರು, ಸಂಸದರು ಹಾಗೂ ಅವರ ಬಾಡಿಗೆ ಭಾಷಣಕಾರರ ಮೇಲೆ ಎಷ್ಟು ಎಫಐಆರ್ ಹಾಕಿಸಿದ್ದೇನೆ ಎಂದು ನೋಡಲಿ ಎಂದು ಸವಾಲು ಹಾಕಿದರು.
ನೀವೊಬ್ಬ ಸಂಸದ, ಬೇರೆ ಸಮಯದಲ್ಲಿ ಹಿಂದೂಗಳ ಸಂರಕ್ಷಕ ಎಂದು ಹೇಳುವವರು ಈಗ ಯಾಕೆ ಅಳುತ್ತಿದ್ದೀರಿ? ಎಂದು ಪ್ರಶ್ನಿಸಿದ ಅವರು, ತೇಜಸ್ವಿ ಸೂರ್ಯ ಅವರೇ, ಈ ಬಾರಿ ನಿಮಗೆ ಎಮರ್ಜೆನ್ಸಿ ಎಕ್ಸಿಟ್ ಇಲ್ಲ. ಓಡಿ ಹೋಗಲು ಅವಕಾಶವಿಲ್ಲ. ಜನರಿಗೆ ನೀವು ಉತ್ತರಿಸಲೇಬೇಕು ಎಂದು ಹೇಳಿದ್ದಾರೆ. ಸುಳ್ಳಿನ ಕಾರ್ಖಾನೆ ಮಾಲೀಕರು ಮೋದಿಯವರೇ ಆಗಿದ್ದಾರೆ. ಇದನ್ನೇ ಒಂದು ಕೈಗಾರಿಕೋದ್ಯಮವನ್ನಾಗಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಹಾಗೂ ಹಲವು ಬಾಡಿಗೆ ಭಾಷಣಕಾರರು ದುಡಿಯುತ್ತಿದ್ದಾರೆ. ಮೋದಿ ಹಾಗೂ ಹಾಗೂ ಇವರ ಬಾಡಿಗೆ ಭಾಷಣಕಾರರು ರಕ್ತಹೀರುವ ಕ್ರಿಮಿಗಳು ಎಂದು ಟೀಕಾಪ್ರಹಾರ ನಡೆಸಿದರು.
ತೇಜಸ್ವಿ ಸೂರ್ಯ ಮಹಿಳಾ ಪೀಡಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬರು ಆರೋಪ ಮಾಡುತ್ತಾರೆ. ಇದರ ಬಗ್ಗೆ ಸುದ್ದಿಯಾಗದಂತೆ 49 ಮಾಧ್ಯಮಗಳ ಮೇಲೆ ನ್ಯಾಯಾಲಯದಲ್ಲಿ ನಿರ್ಬಂಧ ಆದೇಶ ತಂದಿದ್ದರು. ಮೀಟೂ ಸೂರ್ಯ ಅವರು ಈ ಕಾರಣಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ನೆನಪಿಸುತ್ತೇನೆ ಎಂದರು. ವಿಮಾನ ಹಾರಾಟದಲ್ಲಿರುವಾಗ ತುರ್ತು ನಿರ್ಗಮನ ಬಾಗಿಲು ತೆರೆಯಲು ಮುಂದಾಗಿದ್ದ ಸೂರ್ಯ ಅವರು ನಂತರ ಕ್ಷಮೆ ಕೇಳಿದ್ದರು. ಅರಬ್ ಮಹಿಳೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಅರಬ್ ಸರ್ಕಾರ ಕೂಡ ಎಚ್ಚರಿಕೆ ನೀಡಿತ್ತು. ಇವರು ರಾಷ್ಟ್ರಕ್ಕೆ ಅಪಮಾನ ಮಾಡಿದ ವ್ಯಕ್ತಿ. ಕೋವಿಡ್ ಸಮಯದಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದು ಹೀರೋ ಆಗಲು ಹೋಗಿ ಬಿಜೆಪಿ ನಾಯಕರನ್ನೇ ಸಿಲುಕಿಸಿದ್ದು ತೇಜಸ್ವಿ ಸೂರ್ಯ ಎಂದಿದ್ದಾರೆ.
ಇನ್ನು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ತೇಜಸ್ವಿ ಸೂರ್ಯ, ಖರ್ಗೆ ಅವರು ತಾವು ಅಧಿಕಾರದಲ್ಲಿರುವುದರಿಂದ ತಮಗೆ ಬೇಕಾದುದನ್ನು ಮಾಡಬಹುದು ಎಂದು ಭಾವಿಸುವ ಒಬ್ಬ ವಿಶಿಷ್ಟ ಅಸಮರ್ಥ ಕಾಂಗ್ರೆಸ್ ರಾಜವಂಶಸ್ಥರು. ಆದರೆ ಪ್ರತಿ ಬಾರಿಯೂ, ತಮ್ಮ ಅಸಮರ್ಥತೆಯಿಂದ ಮತ್ತೆ ತಮ್ಮ ಸ್ಥಳಕ್ಕೆ ವಾಪಸಾಗುತ್ತಾರೆ. ವಕ್ಫ್ ಭೂಕಬಳಿಕೆಯಿಂದ ಹಾವೇರಿಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಾನು ಟ್ವೀಟ್ ಮಾಡಿದಾಗ, ಹಾವೇರಿ ಪೊಲೀಸರಿಗೆ ಸುಳ್ಳು ಕೇಸು ದಾಖಲಿಸಿದ್ದಾರೆ. ನಾನು ತಪ್ಪು ಮಾಹಿತಿ ನೀಡಿದ್ದೇನೆ ಎಂದು ಸುಳ್ಳು ಹಬ್ಬಿಸಿದ್ದಾರೆ. ಅವರು ಪೊಲೀಸರಿಂದ ಸುಳ್ಳು ಹೇಳಿಸಿದ್ದಾರೆ. ಸತ್ಯ ಮರೆಮಾಚಲು ಮಾಧ್ಯಮಗಳನ್ನು ಬೆದರಿಕೆ ಹಾಕಿದ್ದಾರೆ. ವಕ್ಫ್ ಬೋರ್ಡ್ ಪಹಣಿ ಬದಲಾವಣೆಯಿಂದ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೃತ ರೈತನ ತಂದೆ ಶುಕ್ರವಾರ ಬಹಿರಂಗಪಡಿಸಿದ್ದಾರೆ ಎಂದು ಹೇಳಿದ್ದಾರೆ.
Advertisement