ಮತದಾರರು ಜಾತಿ ಮೀರಿ ಯೋಚಿಸಿ ಅಭಿವೃದ್ಧಿಗೆ ಮತ ಹಾಕುತ್ತಾರೆಂಬ ವಿಶ್ವಾಸವಿದೆ: ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ (ಸಂದರ್ಶನ)
ಚನ್ನಪಟ್ಟಣ ಅಖಾಡ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹಾಗೂ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವಿನ ಪೈಪೋಟಿ ತೀವ್ರಗೊಳ್ಳುತ್ತಿದೆ. ಕ್ಷೇತ್ರ ಗೆಲ್ಲಲು ಎರಡು ಪಕ್ಷಗಳು ತಮ್ಮೆಲ್ಲಾ ಸಾಮರ್ಥ್ಯಗಳನ್ನು ಬಳಕೆ ಮಾಡುತ್ತಿವೆ.
ಈ ಬಾರಿ ಚನ್ನಪಟ್ಟಣ ಚುನಾವಣಾ ಅಖಾಡದಲ್ಲಿ ಕಣ್ಣೀರು ಹಾಗೂ ಭಾವನಾತ್ಮಕ ವಿಚಾರಗಳೇ ಸದ್ದು ಮಾಡುತ್ತಿದೆ. ಎಚ್‌ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಕಣದಲ್ಲಿ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಕೂಡಾ ಆರೋಗ್ಯ ಸಮಸ್ಯೆಯ ನಡುವೆಯೂ ಮೊಮ್ಮಗನ ಪರವಾಗಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಸ್ವತಃ ದೇವೇಗೌಡರು ಅವರೇ ಪ್ರಚಾರಕ್ಕಿಳಿದಿರುವುದು ಚುನಾವಣಾ ಅಖಾಡ ಮತ್ತಷ್ಟು ರಂಗೇರುವಂತೆ ಮಾಡಿದೆ.
ಪ್ರಚಾರ ಕಣದಲ್ಲಿ ಎಚ್‌ಡಿ ದೇವೇಗೌಡರು ಕಾಣಿಸಿಕೊಂಡಿರುವುದು ಕಾಂಗ್ರೆಸ್‌ಗೂ ತಲೆನೋವಾಗಿ ಮಾರ್ಪಟ್ಟಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಪ್ರಬಲವಾಗಿ ಇರುವುದರಿಂದ ಹಾಗೂ ಒಕ್ಕಲಿಗ ಮತಗಳು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಆ ಮತಗಳನ್ನು ಸೆಳೆಯಲು ದೇವೇಗೌಡರ ಪ್ರಚಾರ ಅನುಕೂಲಕರವಾಗಲಿದೆ ಎಂಬುವುದು ಜೆಡಿಎಸ್ ಲೆಕ್ಕಾಚಾರವಾಗಿದೆ. ಜೆಡಿಎಸ್ ಸಾಂಪ್ರದಾಯಿಕ ಮತಗಳು ನಿಖಿಲ್‌ಗೆ ಸಿಕ್ಕೇ ಸಿಗುತ್ತವೆಯಾದರೂ, ಮುಸ್ಲಿಂ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವಾಗಿದೆ. ಈ ಬಾರಿ ಜೆಡಿಎಸ್ ಪಕ್ಷದ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮತದಾರರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣ ಅಖಾಡ ತೀವ್ರ ಕುತೂಹಲವನ್ನು ಕೆರಳಿಸಿದ್ದರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯೋಗೇಶ್ವರ್ ಅವರು ಮತದಾರರು ಜಾತಿ ಮೀರಿ ಯೋಚಿಸಿ ಅಭಿವೃದ್ಧಿಗೆ ಮತ ಹಾಕುತ್ತಾರೆಂಬ ವಿಶ್ವಾಸ ವ್ಯಕ್ತಪಡಿಲಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಯೋಗೇಶ್ವರ್ ಅವರು ಮಾತನಾಡಿದ್ದಾರೆ.
ಉಪಚುನಾವಣೆಗೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇದೆ, ಈಗ ನಿಮ್ಮ ಆಲೋಚನೆಗಳು ಹೇಗಿದೆ?
ಚುನಾವಣಾ ಅಲೆ ನನ್ನ ಪರವಾಗಿಯೇ ಇದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಹೀಗಾಗಿ, ಜನರು ಅಸಮಾಧಾನಗೊಂಡಿದ್ದು, ನನ್ನ ಪರವಾಗಿ ಮತ ಚಲಾಯಿಸಲಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಸಮುದಾಯ ಅವರ ಪರವಾಗಿ ನಿಲ್ಲುವುದಿಲ್ಲವೇ?
ಚುನಾವಣೆ ಸಂದರ್ಭದಲ್ಲಿ ಮಾತ್ರ ಜಾತಿ ಇಟ್ಟುಕೊಂಡು ಆಟವಾಡುತ್ತಾರೆ. ಆದರೆ ನಾನು ಸಾರ್ವಕಾಲಿಕ ಸಮಾಜದ ಪರವಾಗಿದ್ದೇನೆ. ದೇವೇಗೌಡರ ಬಗ್ಗೆ ನನಗೆ ಗೌರವವಿದೆ. ಆದರೆ, ಸಾರ್ವಜನಿಕ ಜೀವನದಲ್ಲಿ ಅವರ ನಿಲುವನ್ನು ಜನ ಒಪ್ಪಿಕೊಳ್ಳುವುದಿಲ್ಲ. ಅವರದು ಕುಟುಂಬದ ಹಿತಾಸಕ್ತಿ, ನನ್ನದು ಸಾರ್ವಜನಿಕ ಹಿತಾಸಕ್ತಿ.
ಇಗ್ಗಲೂರು ಅಣೆಕಟ್ಟಿನ ಶ್ರೇಯಸ್ಸು ಗೌಡರದ್ದು. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅವರು (ಗೌಡ) ಇಗ್ಗಲೂರು ಬ್ಯಾರೇಜ್‌ಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ. ಯೋಜನೆ ಬಗ್ಗೆ ಅವರಿಗೆ ಸ್ವಲ್ಪವೂ ಕಲ್ಪನೆ ಇರಲಿಲ್ಲ. ದೇವೇಗೌಡ ಪ್ರಧಾನಿಯಾದಾಗ ಅವರ ಮೇಲಿನ ಅಭಿಮಾನದಿಂದ ಆಗ ಶಾಸಕರಾಗಿದ್ದ ವರದೇಗೌಡರು ಇಗ್ಗಲೂರು ಬ್ಯಾರೇಜ್‌ಗೆ ಅವರ ಹೆಸರಿಟ್ಟು ಉದ್ಘಾಟನೆ ಮಾಡಿಸಿದರು. ಅದರಲ್ಲಿ ದೇವೇಗೌಡರ ಪಾತ್ರವಿಲ್ಲ. ಕಾವೇರಿ ಮತ್ತು ಸತ್ತೇಗಾಲ ಯೋಜನೆಯಿಂದ ಅಣೆಕಟ್ಟಿನ ಮೂಲ ಕಂಡು ಕೊಂಡು ಕಾರ್ಯಾರಂಭ ಮಾಡಲಾಯಿತು. ಡಿ.ವಿ.ಸದಾನಂದಗೌಡ ಸಿಎಂ ಆಗಿದ್ದಾಗ ಯೋಜನೆಗೆ ಮಂಜೂರಾತಿ ಪಡೆದಿದ್ದೆ, ಬಳಿಕ ಸಿಎಂ ಆದ ಸಿದ್ದರಾಮಯ್ಯ ಅವರು ಯೋಜನೆಗೆ ಹಣ ಬಿಡುಗಡೆ ಮಾಡಿದ್ದರು. ಇದರ ಕ್ರೆಡಿಟ್ ನ್ನು ಯಾವುದೇ ಸರ್ಕಾರವು ಪಡೆಯಲು ಸಾಧ್ಯವಿಲ್ಲ. ಕಾವೇರಿ ಜಲ ನ್ಯಾಯಮಂಡಳಿ ತೀರ್ಪಿನ ನಂತರ ಪೈಪ್‌ಲೈನ್‌ಗಳನ್ನು ತೆಗೆಯಲಾಗುವುದು ಎಂದು ಗೌಡರು ಹೇಳಿರುವುದಕ್ಕೆ ನನ್ನ ಬಳಿ ಸಾಕ್ಷ್ಯವಿದೆ.
ಎರಡು ಚುನಾವಣೆಯಲ್ಲಿ ಸತತ ಸೋಲಿನ ನಂತರ ನಿಖಿಲ್ ಜನರ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ...
ಬೇರೆ ಕಡೆಯ (2019 ರಲ್ಲಿ ಮಂಡ್ಯ ಮತ್ತು 2023 ರಲ್ಲಿ ರಾಮನಗರ) ಚುನಾವಣೆಯಲ್ಲಿ ಸೋತಿದ್ದೇನೆಂದು ಚನ್ನಪಟ್ಟಣದಲ್ಲಿ ಅದನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ.
ನೀವು ಸ್ವತಂತ್ರವಾಗಿ ಅಥವಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಅದು ನಿಮಗೆ ಸುಲಭವಾಗುತ್ತಿತ್ತೇ?
ಬಹುಶಃ ಹೌದು. ಆದರೆ, ನಾನು ಕಾಂಗ್ರೆಸ್ ಸೇರಲು ಕಾರಣ ಜನರಿಗೆ ಅರ್ಥವಾಗುತ್ತಿದ್ದಂತೆ ಮತದಾನದ ಮಾದರಿ ನನ್ನ ಪರವಾಗಿ ಬದಲಾಗಿದೆ.
ಕುಮಾರಸ್ವಾಮಿ ಎಲ್ಲ ಸಮುದಾಯಗಳನ್ನು ಓಲೈಸುತ್ತಿದ್ದಾರೆ. ಇದೀಗ ನಿಮ್ಮ ನಿಲುವು ಹೇಗಿರುತ್ತದೆ?
ಅವರ ಪ್ರಯತ್ನ ಅವರು ಮಾಡಲಿ... ಆದರೆ, ಅಂತಿಮವಾಗಿ ಜನರು ನಾನು ಹಿಂದೆ ಮಾಡಿದ ಕೆಲಸಕ್ಕಾಗಿ ಜಾತಿ ಗಡಿಗಳನ್ನು ಮೀರಿ ಯೋಚಿಸಿ ನನಗೆ ಮತ ಹಾಕುತ್ತಾರೆಂಬ ವಿಶ್ವಾಸವಿದೆ.
ನೀವು ಗೆದ್ದರೆ ಡಿಸಿಎಂ ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರಾ?
ನನ್ನ ಗೆಲುವು ಕಾಂಗ್ರೆಸ್ ಮತ್ತು ಡಿಕೆ ಶಿವಕುಮಾರ್ ಅವರ ಕೈಯನ್ನು ಬಲಪಡಿಸುತ್ತದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ನನ್ನ ನಿರ್ಧಾರವು 2024 ರಲ್ಲಿ ಬಿಜೆಪಿಯ ಡಾ.ಸಿ.ಎನ್. ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಸಹಾಯ ಮಾಡಿತು. ಈಗ ಡಿಕೆ. ಶಿವಕುಮಾರ್ ಅವರ ಮುಂದಿನ ನಡೆಗಳಲ್ಲಿ ಅವರ ಪರ ನಿಲ್ಲುತ್ತೇನೆ.