ರಾಮನಗರ: ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಇಂದು ಅಂತ್ಯವಾಗಲಿದ್ದು, ಕಾಂಗ್ರೆಸ್ ಹಾಗೂ ಎನ್ ಡಿಎ ಅಭ್ಯರ್ಥಿಗಳು ಅಬ್ಬರದ ಪ್ರಚಾರದ ಮೂಲಕ ಮತದಾರರ ಮನವೊಲಿಕೆಗೆ ಕೊನೆ ಹಂತದಕಸರತ್ತು ನಡೆಸಿದ್ದಾರೆ.
ಈ ನಡುವೆ ಸಿಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಿಂದಾಗಿ ಹೈವೊಲ್ಜೇಜ್ ಕಣವಾಗಿ ಗಮನ ಸೆಳೆದಿರುವ ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆಯಲ್ಲಿ ವಸತಿ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಭಾನುವಾರ ರಾತ್ರಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಪರವಾಗಿ ಪ್ರಚಾರ ನಡೆಸಿದ ಜಮ್ಮೀರ್ ಅಹ್ಮದ್ ಖಾನ್ , ಹೆಚ್ಡಿ ಕುಮಾರಸ್ವಾಮಿ ಟೀಕಿಸುವ ಭರದಲ್ಲಿ “ಬಿಜೆಪಿಯವರಿಗಿಂತ ಕುಮಾರಸ್ವಾಮಿ ಕಾಲಿಯಾ ಎಂದು ಕರೆದಿದ್ದಾರೆ. ಕಾಲಿಯಾ ಅಂದರೆ ಒಂದು ಅರ್ಥದಲ್ಲಿ ಕರಿಯ, ಮತ್ತೊಂದು ಅರ್ಥದಲ್ಲಿ ವಿಷಪೂರಿತ ನಾಗರ ಹಾವು ಎಂಬರ್ಥವಾಗುತ್ತದೆ.
ಯೋಗೇಶ್ವರ್ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಪ್ರಾರಂಭ ಮಾಡಿದರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಜೆಡಿಎಸ್ ಹೋಗಬೇಕು ಅಂತ ಅಂದುಕೊಂಡಿದ್ದರು, ಆದರೆ ಕಾಲಿಯಾ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್ಗೆ ಹೋಗಿಲ್ಲ. ಈ ಹಿಂದೆ ಹಿಜಾಬ್ ಬೇಡ ಅಂದಿದ್ದೀರಿ. ಈಗ ನಿನಗೆ ಮುಸಲ್ಮಾನರ ಮತ ಬೇಕಾ? ಕುಮಾರಸ್ವಾಮಿ ಬಿಜೆಪಿಗೆ ಹೋಗಿ ಮುಸಲ್ಮಾನರನ್ನು ಖರೀದಿ ಮಾಡ್ತಾನಂತೆ. ಏ ಕುಮಾರಸ್ವಾಮಿ ನಿನ್ ರೇಟು ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತಾರೆ ಎಂದು ಜಮೀರ್ ವಾಗ್ದಾಳಿ ನಡೆಸಿದರು.
ಜಮೀರ್ ಹೇಳಿಕೆ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಮೊದಲು ಜಾತಿ ಆಧಾರದ ಮೇಲೆ ವಿಭಜನೆ ಮಾಡಿದ ಕಾಂಗ್ರೆಸ್ ಇದೀಗ ಸ್ಯಾಮ್ ಪಿತ್ರೋಡಾ ರೀತಿಯಲ್ಲಿ ಬಣ್ಣದ ಆಧಾರದ ಮೇಲೆ ವಿಂಗಡಿಸುತ್ತಿದೆ. ದಕ್ಷಿಣ ಭಾರತೀಯರನ್ನು ಆಫ್ರಿಕನ್ನರು ಎಂದು ಕರೆದಿದ್ದ ಸ್ಯಾಮ್ ಪಿತ್ರೋಡಾ ಅವರಿಗೆ ರಾಹುಲ್ ಗಾಂಧಿ ಬಡ್ತಿ ನೀಡಿದ್ದರು. ಈಗ ಜಮೀರ್ ಅವರಿಗೂ ಬಡ್ತಿ ನೀಡಲಿದ್ದಾರೆ ಎಂದು ಟೀಕಿಸಿದ್ದಾರೆ.
Advertisement