ಚನ್ನಪಟ್ಟಣ: ಜಿದ್ದಾ ಜಿದ್ದಿನ ಅಖಾಡವಾಗಿ ಮಾರ್ಪಟ್ಟಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದೆ.
ಬಹಿರಂಗ ಪ್ರಚಾರದ ಕೊನೆಯ ಗಳಿಗೆಯಲ್ಲಿ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ನೀಡಿದ ಹೇಳಿಕೆ ಸಾಕಷ್ಟು ಸದ್ದು ಗದ್ದಲಕ್ಕೆ ಕಾರಣವಾಗುತ್ತಿದೆ.
“ಕುಮಾರಸ್ವಾಮಿಯವರನ್ನು ನಾನು ಪ್ರೀತಿಯಿಂದ ಕರಿಯಣ್ಣ ಅಂತಾನೇ ಕರೆಯೋದು. ಅವರು ನನ್ನನ್ನು ಕುಳ್ಳ ಅಂತಿದ್ರು” ಎಂದು ಜಮೀರ್ ಅಹ್ಮದ್ ಖಾನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
“ಅವರು ನನ್ನನ್ನು ಕುಳ್ಳ ಅಂತಾರೆ, ನಾನು ಪ್ರೀತಿಯಿಂದ ಅವರನ್ನು ಕರಿಯಣ್ಣ ಅಂತಾನೇ ಕರೆಯುತ್ತಿದ್ದೆ”. ಕುಳ್ಳಗಿರುವ ನನ್ನನ್ನು ಅವರು ಯಾವಾಗಲೂ ಕುಳ್ಳ ಅಂತ ಕರೆಯುತ್ತಾರೆ. ಭಾಷಣ ಮಾಡುವಾಗ ಅವರನ್ನು ಕರಿಯಣ್ಣ ಎಂದಿದ್ದೇನೆಯೇ ಬಣ್ಣದ ಆಧಾರದ ಮೇಲೆ ಜನಾಂಗೀಯ ನಿಂದನೆ ಮಾಡಿಲ್ಲ ಎಂದು ಜಮೀರ್ ಸ್ಪಷ್ಟಪಡಿಸಿದ್ದಾರೆ.
ನನಗೆ ರಾಜಕೀಯ ಗುರು ಅಂದ್ರೆ ದೇವೇಗೌಡರು. ಆದರೆ 93ನೇ ವಯಸ್ಸಿನಲ್ಲಿ ಕುಮಾರಸ್ವಾಮಿ ಅವರು, ದೇವೇಗೌಡರರಿಂದ ಪ್ರಚಾರ ಮಾಡಿಸುತ್ತಿದ್ದಾರೆ. ಇದು ನನಗೆ ನೋವು ತಂದಿದೆ ಅಂತ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಜಮೀರ್ ಅಹ್ಮದ್ ಖಾನ್ ನೀಡಿರುವ ಈ ವಿವಾದಾತ್ಮಕ ಹೇಳಿಕೆ ಇದೀಗ ಚುನಾವಣಾ ಅಸ್ತ್ರವಾಗಿದೆ. ಚನ್ನಪಟ್ಟಣದಲ್ಲಿ ಜಮೀರ್ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತ ಕಡೆ ಜಮೀರ್ ಹೇಳಿಕೆ ಕಾಂಗ್ರೆಸ್ ನಾಯಕರಿಗೂ ಮುಜುಗರ ಉಂಟು ಮಾಡುತ್ತಿದೆ.
Advertisement