ಹುಬ್ಬಳ್ಳಿ: ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಯ ಪ್ರಚಾರ ಸೋಮವಾರ ಸಂಜೆ 5.30ಕ್ಕೆ ಮುಕ್ತಾಯಗೊಂಡಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ನಾಯಕರ ನಡುವಿನ ಆರೋಪ, ಪ್ರತ್ಯಾರೋಪ, ಗದ್ದಲದ ನಡುವೆ ಜನರಿಗೆ ಸಂಬಂಧಿಸಿದ ನೈಜ ಸಮಸ್ಯೆಗಳು ಪ್ರಸ್ತಾಪವಾಗಲಿಲ್ಲ. ತಮ್ಮ ಪ್ರತಿನಿಧಿ ಯಾರೆಂದು ನಿರ್ಧರಿಸಲು ಸಾರ್ವಜನಿಕರಿಗೆ ಈಗ ಅವಕಾಶವಿದ್ದು, ಬುಧವಾರ ಮತದಾನ ಮಾಡಲಿದ್ದಾರೆ.
1994ರಲ್ಲಿ ಕೊನೆಯದಾಗಿ ಗೆದ್ದಿದ್ದ ಕ್ಷೇತ್ರದಲ್ಲಿ ಈ ಬಾರಿಯ ಉಪ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಶ್ರಮಿಸುತ್ತಿದ್ದು, ತನ್ನ ಅಭ್ಯರ್ಥಿ ಯಾಸೀರ್ ಅಹಮದ್‌ಖಾನ್ ಪಠಾಣ್ ಪರ ಪಕ್ಷದ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಇಲ್ಲಿ 2004ರಿಂದ ಬಿಜೆಪಿ ಅಧಿಕಾರ ಹಿಡಿದಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಗೆಲುವು ಖಚಿತ ಎನ್ನಲಾಗುತಿತ್ತು. ಆದರೆ ಸಿಎಂ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತಿತರು ಕಳೆದ ಮೂರು ದಿನಗಳ ಕಾಲ ಸರಣಿ ಸಾರ್ವಜನಿಕ ಸಭೆ ನಡೆಸುವ ಮೂಲಕ ಹೈವೋಲ್ಟೇಜ್ ಕ್ಷೇತ್ರವನ್ನಾಗಿ ಮಾಡಿದ್ದು, ಕಾಂಗ್ರೆಸ್ - ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ.
ಬಿಜೆಪಿ ಪರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಆರ್ ಅಶೋಕ ಮತ್ತಿತರ ದಿಗ್ಗಜರು ಪ್ರಚಾರ ನಡೆಸಿದ್ದಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ 8,500 ಮತಗಳಿಂದ ಹಿನ್ನಡೆ ಸಾಧಿಸಿರುವುದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 36,000 ಮತಗಳಿಂದ ಗೆದ್ದಿತ್ತು.
ಕಾಂಗ್ರೆಸ್, ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳ ಮೇಲೆ ಕಣ್ಣಿಟ್ಟಿದ್ದರೆ, ಬಿಜೆಪಿಯು ಕುರುಬರನ್ನು ಹೊರತುಪಡಿಸಿ ಮೇಲ್ವರ್ಗದ ಮತದಾರರನ್ನು, ಮುಖ್ಯವಾಗಿ ಲಿಂಗಾಯತರು ಮತ್ತು ಇತರ ಹಿಂದುಳಿದ ಜಾತಿಗಳನ್ನು ಬಲವಾಗಿ ಅವಲಂಬಿಸಿದೆ. ವಕ್ಫ್ ವಿವಾದ ಕಾಂಗ್ರೆಸ್ ಅನ್ನು ಗುರಿಯಾಗಿಸಲು ಬಿಜೆಪಿಗೆ ಮಹತ್ವದ ಆಸ್ತ್ರ ನೀಡಿದೆ. ಇದು ಮತದಾರರ ಮೇಲೆ ಪರಿಣಾಮ ಬೀರಿದೆಯೇ ಎಂಬುದು ಫಲಿತಾಂಶದ ದಿನವಾದ ನವೆಂಬರ್ 23 ರಂದು ಗೊತ್ತಾಗಲಿದೆ.
Advertisement