ಶಿಗ್ಗಾವಿ (ಹಾವೇರಿ): ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್‌ಖಾನ್ ಪಠಾಣ್ ವಿರುದ್ಧ ರೌಡಿಶೀಟರ್ ಓಪನ್ ಇದೆ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹೇಳಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಹೇಳಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಪಠಾಣ್ ತನ್ನ ವಿರುದ್ಧ 17-18 ಪ್ರಕರಣಗಳಿವೆ ಎಂದು ಕಳೆದ ವರ್ಷ ಅಫಿಡವಿಟ್‌ನಲ್ಲಿ ಘೋಷಿಸಿದ್ದರು. ಈಗ, ಈ ಪ್ರಕರಣಗಳಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಈತನ ವಿರುದ್ಧ ಇನ್ನೂ ಪ್ರಕರಣಗಳು ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ. ಚುನಾವಣೆ ಮುಂಚೆ ಸೈಯ್ಯದ ಅಜ್ಜಂಪೀರ ಖಾದ್ರಿ ಅವರು ಕಾಂಗ್ರೆಸ್ ಅಭ್ಯರ್ಥಿ ರೌಡಿ ಅಂತ ಹೇಳಿದ್ದರು. ಅವರ ವಿರುದ್ಧ 17 ಕೇಸ್ ಇತ್ತು. ಈ ಪ್ರಕರಣಗಳ ಕುರಿತು ಚುನಾವಣಾಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದು ಪರಿಶೀಲಿಸಿಲ್ಲ. ಈಗ ಪೊಲೀಸ್ ವರಿಷ್ಠಾಧಿಕಾರಿ ಅವರು ಪ್ರಕರಣ ಇದೆ ಅಂತ ಹೇಳಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ, ಇಂದೇ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಕಾನೂನು ಹೋರಾಟ ಮಾಡುತ್ತೇನೆಂದು ಹೇಳಿದರು.
ಈ ವಿಷಯಕ್ಕೆ ಸಂಬಂಧಿಸಿ ಹಾವೇರಿ ಡಿಸಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಚುನಾವಣಾಧಿಕಾರಿ ಎಸಿಗೆ ದೊಡ್ಡ ಜವಾಬ್ದಾರಿ ಇದೆ. ಅವರು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅವರೂ ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬರುತ್ತದೆ. ಸುಳ್ಳು ಅಫಿಡವಿಟ್ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆಂದು ಕಿಡಿಕಾರಿದರು.
ಮತದಾರರೂ ಕೂಡ ಜನರ ಸೇವೆ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೋ ಅಥವಾ ಅವರನ್ನು ದಾರಿ ತಪ್ಪಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೋ ಎಂಬುದನ್ನು ನಿರ್ಧರಿಸಬೇಕು ಎಂದು ಹೇಳಿದರು.
ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಆಗಿ ಪರಿವರ್ತಿಸುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೈವಾಡವಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ರಿಯಲ್ ಎಸ್ಟೇಟ್ ಅವರ ವೃತ್ತಿಯಾಗಿರಬಹುದು, ಇದು ಅನಿಯಂತ್ರಿತವಾಗಿ ಮುಂದುವರಿದರೆ ಎಲ್ಲ ಜಮೀನು ಮಾರುತ್ತಾರೆ ಎಂದು ತಿಳಿಸಿದರು,
Advertisement