ಶಿಗ್ಗಾಂವಿ: ರಾಜ್ಯ ಕಾಂಗ್ರೆಸ್ ಸರ್ಕಾರ ಹದಿನೈದು ದಿನದಿಂದ ವಿಧಾನಸೌಧಕ್ಕೆ ಬೀಗ ಹಾಕಿ ಹಣದ ಚೀಲ ತೆಗೆದುಕೊಂಡು ಬಂದು ಚುನಾವಣೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಆರೋಪಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪುತ್ರ ಹಾಗೂ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಯೊಂದಿಗೆ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಭರತ್ ಬೊಮ್ಮಾಯಿ ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆರಂಭದಿಂದಲೂ ಹೇಳುತ್ತಿದ್ದೇನೆ, ಕ್ಷೇತ್ರದ ಸಾಮಾನ್ಯ ಜನರು ಬಹಿರಂಗವಾಗಿ ಬೆಂಬಲ ತೋರಿಸಿದ್ದಾರೆ. ಈ ಬೆಂಬಲ ದಿನದಿಂದ ದಿನಕ್ಕೆ ಹೆಚ್ಚಾಗಿರುವುದಾಗಿ ಹೇಳಿದರು.
ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ವಿಧಾನಸೌಧಕ್ಕೆ ಬೀಗ ಹಾಕಿ ಹಣ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಗೌರವಿಸಿದ್ದಾರೆ. ಸರ್ಕಾರದ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಅವರು ತಮ್ಮ ರಾಜಕೀಯ ಅಧ;ಪತನವನ್ನು ಈ ರೀತಿಯಲ್ಲಿ ತೋರಿಸಿದ್ದಾರೆ. ಕಾಂಗ್ರೆಸ್ ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸತ್ಯವಲ್ಲ. ಎಲ್ಲಾದಕ್ಕೂ ನವೆಂಬರ್ 23 ರೊಳಗೆ ಉತ್ತರ ದೊರೆಯಲಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ರೌಡಿ ಶೀಟರ್ ಪ್ರಕರಣ ಇನ್ನೂ ಖುಲಾಸೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೇ ಹೇಳಿದ್ದರು. ಆದರೆ ಎರಡು ತಾಸಿನಲ್ಲಿ ಉಲ್ಟಾ ಹೊಡೆದರು. ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.
Advertisement