ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿ-ಜೆಡಿಎಸ್ ಸತತ ಪ್ರಯತ್ನ- ಡಾ.ಜಿ. ಪರಮೇಶ್ವರ್

ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹಾಗೂ ಜೆಡಿಎಸ್ ಸತತ ಪ್ರಯತ್ನ ನಡೆಸುತ್ತಿವೆ. ಇದಕ್ಕಾಗಿ ಮುಡಾ ಪ್ರಕರಣ ಮತ್ತಿತರ ವಿಚಾರಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಸರ್ಕಾರ ಅಸ್ಥಿರಗೊಳಿಸುವುದು ಅಸಾಧ್ಯ ಎಂಬುದು ಅವರಿಗೆ ಗೊತ್ತಿದೆ
DR. G. Parameshwar
ಡಾ. ಜಿ.ಪರಮೇಶ್ವರ್
Updated on

ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸತತ ಪ್ರಯತ್ನ ನಡೆಸುತ್ತಿವೆ. ಅದಕ್ಕೆ ನಾವು ಬಿಡೋದಿಲ್ಲ ಎಂದು ಗುರುವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹಾಗೂ ಜೆಡಿಎಸ್ ಸತತ ಪ್ರಯತ್ನ ನಡೆಸುತ್ತಿವೆ. ಇದಕ್ಕಾಗಿ ಮುಡಾ ಪ್ರಕರಣ ಮತ್ತಿತರ ವಿಚಾರಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಸರ್ಕಾರ ಅಸ್ಥಿರಗೊಳಿಸುವುದು ಅಸಾಧ್ಯ ಎಂಬುದು ಅವರಿಗೆ ಗೊತ್ತಿದೆ ಎಂದರು.

ಶಾಸಕರಿಗೆ ಆಮಿಷವೊಡ್ಡುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ 42 ಶಾಸಕರನ್ನು ಹಣ ಕೊಟ್ಟು ಖರೀದಿ ಮಾಡ್ತು ಎಂದು ಜನ ಹೇಳುತ್ತಿದ್ದಾರೆ. ಅಲ್ಲಿ ಸರ್ಕಾರ ಪತನಗೊಳಿಸಿ ತದನಂತರ ಅವರ ಸರ್ಕಾರ ರಚನೆ ಮಾಡಲಾಯಿತು. ಈ ಹಿಂದೆ ಕೂಡಾ ಅವರು ಇದೇ ರೀತಿಯ ಕೆಲಸ ಮಾಡಿದ್ದರು. ಪ್ರಜಾಪ್ರಭುತ್ವದಲ್ಲಿ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಜನ ಎಲ್ಲವನ್ನೂ ಗಮನಿಸಿ ತೀರ್ಮಾನಿಸುತ್ತಾರೆ. ಅಷ್ಟು ಸುಲಭವಾಗಿ ಜನ ಒಪ್ಪಿಕೊಳ್ಳಲ್ಲ, ಅವರನ್ನು ತಿರಸ್ಕರಿಸುತ್ತಾರೆ. ನಾವೂ ಕೂಡ ಜನರ ಮುಂದೆ ಎಲ್ಲವನ್ನೂ ತೆಗೆದುಕೊಂಡು ಹೋಗುತ್ತೇವೆ ಎಂದು ಗೃಹ ಸಚಿವರು ಉತ್ತರಿಸಿದರು.

ಬಿಜೆಪಿ 50 ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡುವ ಮೂಲಕ ಸರ್ಕಾರ ಪತನಕ್ಕೆ ಪ್ರಯತ್ನಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಒಂದು ವೇಳೆ ಸಿಎಂ ಇಂತಹ ಹೇಳಿಕೆ ನೀಡಿದ್ದರೆ ಆಫರ್ ಬಗ್ಗೆ ಅವರಿಗೆ ಮಾಹಿತಿ ಇರಬಹುದು. ಸಿಎಂ ಈ ರೀತಿ ಹೇಳಿರುವ ಹಿಂದೆ ಅರ್ಥವಿರುತ್ತದೆ ಎಂದರು.

ಇನ್ನೂ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಒಳ ಮೀಸಲಾತಿ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು. ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಸಮಿತಿ ರಚಿಸಲಾಗಿದ್ದು, ಮೂರು ತಿಂಗಳೊಳಗೆ ವರದಿ ಕೇಳಲಾಗಿದೆ. ಇದು ಒಳ್ಳೆಯ ಬೆಳವಣಿಗೆ. ಎಂಪಿರಿಕಲ್ ಡಾಟಾ (ಪರಮರ್ಶನಾ ಡೇಟಾ) ಅಗತ್ಯವಿದ್ದು, ಇದು ಸಲ್ಲಿಕೆಯಾಗುತ್ತಿದ್ದಂತೆಯೇ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com