CM Siddaramaiah, BY Vijayendra
ಸಿಎಂ ಸಿದ್ದರಾಮಯ್ಯ, ಬಿ.ವೈ. ವಿಜಯೇಂದ್ರ

ರಾಜ್ಯದಲ್ಲಿ ನಿಮ್ಮದೇ ಸರ್ಕಾರ, ತನಿಖಾ ಸಂಸ್ಥೆಗಳಿವೆ, 50 ಕೋಟಿ ರೂ ಆಮಿಷದ ಮೂಲ ತಿಳಿಸಿ: ಸಿಎಂಗೆ ವಿಜಯೇಂದ್ರ ಟಾಂಗ್

ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಂತೆ ಕಾಣುತ್ತಿದೆ ಅದಕ್ಕಾಗಿಯೇ ರೂ.50 ಕೋಟಿಗೆ ಅವರು ಮಾರಾಟವಾಗುತ್ತಿದ್ದಾರೆ ಎಂಬ ಕಪೋಲಕಲ್ಪಿತ ಆರೋಪ ಮಾಡುತ್ತಿದ್ದೀರಿ. ಇದು ನೀವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸಿ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ.
Published on

ಬೆಂಗಳೂರು: ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ, ನಿಮ್ಮದೇ ತನಿಖಾ ಸಂಸ್ಥೆಗಳಿವೆ, 50 ಕೋಟಿ ರೂ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸುವುದು ನಿಮ್ಮ ನೈತಿಕ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಟಾಂಗ್ ನೀಡಿದ್ದಾರೆ.

ಸರ್ಕಾರ ಉರುಳಿಸಲು 50 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ ಆಮಿಷ ನೀಡಲಾಗಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಂತೆ ಕಾಣುತ್ತಿದೆ ಅದಕ್ಕಾಗಿಯೇ ರೂ.50 ಕೋಟಿಗೆ ಅವರು ಮಾರಾಟವಾಗುತ್ತಿದ್ದಾರೆ ಎಂಬ ಕಪೋಲಕಲ್ಪಿತ ಆರೋಪ ಮಾಡುತ್ತಿದ್ದೀರಿ. ಇದು ನೀವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸಿ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ. ನಿಮ್ಮ ಈ ಹೇಳಿಕೆ ಕಾಂಗ್ರೆಸ್ ಶಾಸಕರುಗಳನ್ನು ಅಂಕೆಯಲಿಟ್ಟುಕೊಳ್ಳಲು ಹಾಗೂ ನಿಮ್ಮನ್ನು ಸುತ್ತುವರೆದಿರುವ ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣೆದಿರುವ ಹತಾಶೆಯ ಸುಳ್ಳಿನ ಕಂತೆ ಎನ್ನುವುದು ಕನಿಷ್ಠ ರಾಜಕೀಯ ಜ್ಞಾನ ಇರುವವರಿಗೂ ಅರಿವಾಗುತ್ತದೆ ಎಂದು ಹೇಳಿದ್ದಾರೆ.

ಸುಳ್ಳು, ಭಂಡತನ, ಕಪೋಲ ಕಲ್ಪಿತ ಸುದ್ದಿಗಳನ್ನು ಹರಿಬಿಡುವುದು ನಿಮ್ಮ ಹಾಗೂ ನಿಮ್ಮ ಪಕ್ಷದ ನಿತ್ಯ ಮಂತ್ರವಾಗಿದೆ. ನೀವು ನಡೆಸಿರುವ ಸರಣೀ ಹಗರಣಗಳ ಹಿನ್ನೆಲೆಯ ಉರುಳು ಬಿಗಿಯಾಗುತ್ತಿರುವಷ್ಟೂ ನಿದ್ದೆಗೆಡುತ್ತಿರುವ ನಿಮ್ಮ ಮನಸ್ಸು ಅಸ್ಥಿರಗೊಂಡಿದೆ ಈ ಹಿನ್ನಲೆಯಲ್ಲಿ ಪ್ರಚಲಿತ ಬೆಳವಣಿಗೆಯನ್ನು ವಿಚಲಿತಗೊಳಿಸುವುದು ಹೇಗೆ ಎಂಬುದರತ್ತಲೇ ನೀವು ನಿಗಾ ಇಟ್ಟಿರುವಂತೆ ಕಾಣುತ್ತಿದೆ.

CM Siddaramaiah, BY Vijayendra
ಸರ್ಕಾರ ಉರುಳಿಸಲು 50 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ ಆಮಿಷ: BJP ವಿರುದ್ಧ ಸಿದ್ದರಾಮಯ್ಯ

ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ನೀವು ಅದರ ಘನತೆಯನ್ನು ಕುಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ, ನಿಮ್ಮದೇ ಸರ್ಕಾರವಿದೆ, ನಿಮ್ಮದೇ ತನಿಖಾ ಸಂಸ್ಥೆಗಳಿವೆ, ರೂ.50 ಕೋಟಿ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸುವುದು ನಿಮ್ಮ ನೈತಿಕ ಜವಾಬ್ದಾರಿಯಾಗಿರುತ್ತದೆ. ಇಲ್ಲದಿದ್ದರೆ ನಿಮ್ಮ ಹೇಳಿಕೆ ಪುಡಾರಿಗಳು ನೀಡುವ ಬಾಲಿಶ ರಾಜಕೀಯ ಹೇಳಿಕೆಯಾಗುತ್ತದೆಯಷ್ಟೆ ಎಂದು ಟಾಂಗ್ ನೀಡಿದ್ದಾರೆ.

ಒಂದು ಕಡೆ ನಿಮ್ಮ ಪುತ್ರ ನ್ಯಾಯಾಂಗ ವ್ಯವಸ್ಥೆಯನ್ನೇ ಅಪಮಾನಿಸುವ ಆರೋಪ ಮಾಡಿದರೆ, ಮತ್ತೊಂದೆಡೆ ನೀವು ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಹತಾಶೆಯಿಂದ ವರ್ತಿಸುತ್ತಿದ್ದೀರಿ. ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದರೆ ಜನ ಸುಮ್ಮನೆ ಬಿಡುವುದಿಲ್ಲ ಎಂದು ಅಬ್ಬರಿಸುತ್ತಿದ್ದೀರಿ ಆದರೆ ವಾಸ್ತವ ಸಂಗತಿ ಏನೆಂದರೆ, ಕರ್ನಾಟಕದ ಜನತೆ ನಿಮ್ಮಂಥ ಭ್ರಷ್ಟ ಮುಖ್ಯಮಂತ್ರಿ ಇನ್ನೂ ಅಧಿಕಾರದಿಂದ ಕೆಳಗಿಳಿಯದೇ ಭಂಡತನ ಪ್ರದರ್ಶಿಸುತ್ತಿದ್ದಾರಲ್ಲ ಎಂದು ರಸ್ತೆಯಲ್ಲಿ ನಿಂತು ಮಾತನಾಡಿಕೊಳ್ಳುತ್ತಿದ್ದಾರೆ, ನಿಮ್ಮ ಗುಪ್ತಚರ ಇಲಾಖೆ ಈ ವಿಷಯವನ್ನು ನಿಮಗೆ ಮುಟ್ಟಿಸಿರಲೇಬೇಕು. ಆದ್ದರಿಂದಲೇ ನೀವು ಇಷ್ಟೊಂದು ವಿಚಲಿತರಾದಂತೆ ಕಪೋಲ ಕಲ್ಪಿತ ಕಥೆಗಳನ್ನು ಸೃಷ್ಟಿಸಿಕೊಂಡು ಬಡ ಬಡಿಸುತ್ತಿದ್ದೀರಿ.

ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು 50 ಕೋಟಿ ಆಮಿಷದ ಗಂಭೀರ ಆರೋಪ ಮಾಡಿರುವ ಹಿನ್ನಲೆಯಲ್ಲಿ ಸರ್ಕಾರ ಬೀಳಿಸಲು ಸಾವಿರಾರು ಕೋಟಿ ಬಂಡವಾಳ ಹೂಡಲು ತಯಾರಾಗಿರುವವರು ಯಾರು? ಎಂಬುದು ಬಹಿರಂಗವಾಗಬೇಕಿದೆ ಈ ನಿಟ್ಟಿನಲ್ಲಿ ಇ.ಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ತನಿಖೆ ನಡೆಸುವುದು ತುರ್ತು ಅಗತ್ಯವಿದೆ, ರಾಜ್ಯದ ಜನತೆಗೆ ಸತ್ಯ ತಿಳಿಯಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com