ಚಿಕ್ಕಮಗಳೂರು: ನಿಮ್ಮ ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೇನಾ? ಕುದುರೇನಾ? ದನನಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್‍ಸಿ ಸಿ.ಟಿ ರವಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 50 ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರು ಖರೀದಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂಬ ಸಿಎಂ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಿಮ್ಮ ಪಕ್ಷದ ಶಾಸಕರು ಅಷ್ಟು ದುರ್ಬಲರಾ? ಬದ್ಧತೆ ಇರುವ ಯಾವುದೇ ಶಾಸಕರನ್ನ ಖರೀದಿ ಮಾಡಲು ಸಾಧ್ಯವಿಲ್ಲ. ನಿಮ್ಮ ಆರೋಪ ಆಧಾರ ರಹಿತ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಮಿಷವೊಡ್ಡಿದವರು ಯಾರು? ಯಾವಾಗ ಆಫರ್ ನೀಡಲಾಯಿತು? ಎಲ್ಲಿ ಮಾತುಕತೆ ನಡೆಸಲಾಗಿತ್ತು? ಜೊತೆಗಿದ್ದವರು ಯಾರು? ಇವೆಲ್ಲವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯನವರು ಮಾಡಿರುವ ಆರೋಪಗಳು ಅತ್ಯಂತ ಗಂಭೀರವಾದುದು. ನಿಮ ಬಳಿಯೇ ತನಿಖಾ ಸಂಸ್ಥೆಗಳಿವೆ. ತಕ್ಷಣವೇ ತನಿಖೆ ನಡೆಸಲು ಯಾವುದಾದರೂ ಸಂಸ್ಥೆಗೆ ವಹಿಸಬೇಕು. ಇಲ್ಲದಿದ್ದರೆ ನ್ಯಾಯಾಲಯ ಕ್ಕಾದರೂ ದೂರು ನೀಡಿ ಎಂದು ಆಗ್ರಹಿಸಿದರು.ಸುಳ್ಳು ಆರೋಪಗಳನ್ನು ಮಾಡುವುದು ಸಿದ್ದರಾಮಯ್ಯನವರಿಗೆ ಇತ್ತೀಚೆಗೆ ಕರಗತವಾಗಿದೆ.
ಯಾರು, ಯಾವಾಗ, ಯಾರನ್ನ ಖರೀದಿ ಮಾಡಲು ಪ್ರಯತ್ನ ಪಟ್ಟಿದ್ದಾರೆ? ಆಧಾರ ಇದ್ದರೆ ದೂರು ನೀಡಿ. ಸಾಕ್ಷಿ ಇದ್ದರೆ ಆಧಾರ ಸಹಿತವಾಗಿ ನ್ಯಾಯಾಲಯದಲ್ಲಿ ನಿರೂಪಿಸಿ. ಸಿಎಂ ಸ್ಥಾನದಲ್ಲಿ ಇದ್ದು, ಆ ಸ್ಥಾನದ ಜವಾಬ್ದಾರಿ ಮರೆತು ಕೇವಲ ಆರೋಪ ಮಾಡೋದು ರಾಜಕೀಯ ಪ್ರೇರಿತ. ಬಿಜೆಪಿ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಲು ಮಾಡುತ್ತಿರುವ ಆರೋಪ ಎಂದು ಕಿಡಿಕಾರಿದ್ದಾರೆ. ದಿನನಿತ್ಯ ಸುಳ್ಳು ಹೇಳುವುದು ಸಿದ್ದರಾಮಯ್ಯರ ರಾಜಕೀಯದ ಭಾಗವಾಗಿದೆ. ಸುಳ್ಳು ಹೇಳದೆ ಇದ್ದರೆ ಊಟವೂ ಜೀರ್ಣ ಆಗಲ್ಲ. ರಾತ್ರಿ ನಿದ್ದೆಯೂ ಬರಲ್ಲ. ಸುಳ್ಳಿಂದಲೇ ರಾಜಕೀಯ ಆರಂಭ ಆಗಿ, ಸುಳ್ಳಿಂದಲೇ ನಿಮ್ಮ ದಿನಚರಿ ಅಂತ್ಯ ಆಗುವ ರೀತಿ ಇದೆ. ಸಾಕ್ಷಿ ಇದ್ದರೆ ನಿರೂಪಿಸಿ, ಇಲ್ಲ ಎಂದರೆ ಸಾರ್ವಜನಿಕವಾಗಿ ಕ್ಷೇಮೆ ಕೇಳಿ ಎಂದು ಆಗ್ರಹಿಸಿದ್ದಾರೆ. ನಾವು ನಿಮ್ಮ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸುತ್ತೇವೆ. ಭ್ರಷ್ಟಾಚಾರವನ್ನು ಹೊರಗೆಳೆದಿದ್ದೇವೆ. ಮುಡಾ, ವಾಲೀಕಿ ಸೇರಿದಂತೆ ಅನೇಕ ಹಗರಣಗಳನ್ನು ಜನತೆಯ ಗಮನಕ್ಕೆ ತಂದಿದ್ದೇವೆ. ಅದನ್ನು ಮರೆಮಾಚಲು ಸುಳ್ಳು ಆರೋಪಗಳನ್ನು ಸಿದ್ದರಾಮಯ್ಯ ಮಾಡಬಾರದು ಎಂದು ಸಿ.ಟಿ.ರವಿ ಒತ್ತಾಯಿಸಿದರು.
Advertisement