ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ: 1 ಬುಟ್ಟಿ ಮಣ್ಣು ಹಾಕಲೂ ಹಣವಿಲ್ಲ ರಸ್ತೆಗುಂಡಿಗೆ; ಮಜವಾದಿ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ಏಕೆ!

ಸ್ವತಃ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ ಒಪ್ಪಿಕೊಂಡಿರುವಂತೆ ರಸ್ತೆಗುಂಡಿಗಳಿಗೆ ಒಂದು ಬುಟ್ಟಿ ಮಣ್ಣು ಹಾಕಲೂ ತಮ್ಮ ಸರ್ಕಾರದ ಬಳಿ ದುಡ್ಡಿಲ್ಲ.
R Ashok
ಆರ್ ಅಶೋಕ್
Updated on

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ, ಶಾಸಕರ ಕ್ಷೇತ್ರಕ್ಕೆ ನೀಡಲು ಹಣ ಕೊರತೆ ಎದುರಿಸುತ್ತಿದೆ ಎಂಬ ಮಾತು ಒಂದೂವರೆ ವರ್ಷದಿಂದ ಕೇಳಿ ಬರುತ್ತಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಐಷಾರಾಮಿ ಕಚೇರಿ ಹೊಂದಲು ಬಯಸಿದ್ದು, ಕೋಟಿ ಕೋಟಿ ಹಣ ವ್ಯಯಿಸಿದ್ದಾರೆ ಎಂದು ವರದಿಯಾಗಿದ್ದು ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಬರೋಬ್ಬರಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಎಂ ಸಿದ್ದರಾಮಯ್ಯನವರ ಕಚೇರಿ ನವೀಕರಣ ಮಾಡುತ್ತಿದೆ ಈ 'ಮಜ'ವಾದಿ ಕಾಂಗ್ರೆಸ್ ಸರ್ಕಾರ ಎಂದು ಕಿಡಿ ಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ ನವರೇ, ಸ್ವತಃ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ ಒಪ್ಪಿಕೊಂಡಿರುವಂತೆ ರಸ್ತೆಗುಂಡಿಗಳಿಗೆ ಒಂದು ಬುಟ್ಟಿ ಮಣ್ಣು ಹಾಕಲೂ ತಮ್ಮ ಸರ್ಕಾರದ ಬಳಿ ದುಡ್ಡಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಅವರ ಪ್ರಕಾರ ಗ್ಯಾರೆಂಟಿಗಳಿಂದ ಕಳೆದ ವರ್ಷ ಪೂರ್ತಿ ಅಭಿವೃದ್ಧಿಗೆ ದುಡ್ಡಿರಲಿಲ್ಲ. ರಾಜ್ಯದ ಜನತೆಯ ಮೇಲೆ ಒಟ್ಟು 1.05 ಲಕ್ಷ ಕೋಟಿ ರೂಪಾಯಿ ಸಾಲ ಇದೆ. ಪರಿಸ್ಥಿತಿ ಹೀಗಿರುವಾಗ ತಮ್ಮ ಕಚೇರಿ ನವೀಕರಣಕ್ಕೆ 3 ಕೋಟಿ ರೂಪಾಯಿ ವೆಚ್ಚ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

R Ashok
ಸಮಾಜವಾದಿ ಎಂದು ಹೇಳಿಕೊಂಡು ಮಜಾವಾದಿ ಆಗಿರುವ ಸಿದ್ದರಾಮಯ್ಯ: ವಿಡಿಯೊ ತೋರಿಸಿ ಜೆಡಿಎಸ್ ಟೀಕೆ

ಕಳೆದ ವರ್ಷವಷ್ಟೇ ತಮ್ಮ ಸರ್ಕಾರಿ ನಿವಾಸ ಕಾವೇರಿ ನವೀಕರಣಗೊಂಡಿದೆ. ಕಾವೇರಿ ನಿವಾಸಕ್ಕೆಂದು ಪೀಠೋಪಕರಣಗಳ ಖರೀದಿ ಮಾಡಲಾಗಿದೆ. ಇದಕ್ಕೆ ಮೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈಗ ತಮ್ಮ ಕಚೇರಿ ನವೀಕರಣಕ್ಕೆ ಮತ್ತೊಮ್ಮೆ ಮೂರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೀರಲ್ಲ, ತಮ್ಮ ಆತ್ಮಸಾಕ್ಷಿ ಇದಕ್ಕೆ ಒಪ್ಪುತ್ತದೆಯೇ? ಇಂತಹ ದುಂದುವೆಚ್ಚ ಮಾಡುವ ಬದಲು, ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿ. ರೈತರಿಗೆ ಕೊಡುವ ಹಾಲಿನ ಖರೀದಿ ದರ ಹೆಚ್ಚಳ ಮಾಡಿ. ಆಂಬುಲೆನ್ಸ್ ಚಾಲಕರಿಗೆ ಮೂರು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಸಂಬಳ ಕೊಡಿ. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚಿಸುವ ಕೆಲಸ ಮಾಡಿ. ನಾನು ಸಮಾಜವಾದಿ, ಬಡವರ ಪರ ಎಂದು ಹೇಳಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡರೆ ಸಾಲದು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಆ ಹಣವನ್ನ ಬಡವರಿಗಾಗಿ ಉಪಯೋಗಿಸಿ, ನುಡಿದಂತೆ ನಡೆಯಿರಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com