ಬೆಂಗಳೂರು: ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡ ಹಾಗೂ ಜೆಡಿಎಸ್ ಪ್ರಾಬಲ್ಯದ ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಡಿಸೆಂಬರ್ 5 ರಂದು ಮೆಗಾ ರ‍್ಯಾಲಿ ನಡೆಸಲು ಆಡಳಿತಾರೂಢ ಕಾಂಗ್ರೆಸ್ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ ಹಿರಿಯ ಸಚಿವರೊಂದಿಗೆ ಸೋಮವಾರ ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.
ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರ ನೇತೃತ್ವದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಣ್ಣ, ಹೌದು, ಬಲವಾದ ಸಂದೇಶ ರವಾನಿಸಲು ಹಾಸನದಲ್ಲಿ ರಾಜಕೀಯ ಸಮಾವೇಶಕ್ಕೆ ಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಮಧ್ಯೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ಡಿಸೆಂಬರ್ 2 ರಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮತ್ತೊಂದು ರ‍್ಯಾಲಿ ನಡೆಯಲಿದೆ.
Advertisement