ಮೈಸೂರು: ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿವೈ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡುವ ಮೂಲಕ ರಾಜ್ಯದ ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ ನೀಡುವ ಹೇಳಿಕೆಗಳನ್ನು ನೀವು ಯಾಕೆ ಮಾಧ್ಯಮಗಳಲ್ಲಿ ತೋರಿಸುತ್ತೀರಿ ಎಂದು ಪ್ರಶ್ನಿಸಿದರು.
ಇದೇ ಯಡಿಯೂರಪ್ಪ ಹಿಂದೆ ತಾವು ಸಿಎಂ ಆಗಿದ್ದಾಗ ಕಾಂಗ್ರೆಸ್ ಸರ್ಕಾರ ಬಡವರಿಗೆ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಪರಿಸ್ಥಿತಿ ಹೀಗಿರುವಾಗ ವಿಜಯೇಂದ್ರ ಯಾವ ನೈತಿಕತೆಯಿಂದ ಬಡವರ ಅಕ್ಕಿ ಬಗ್ಗೆ ಮಾತಾಡುತ್ತಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ಕೊಡುವುದು ಬೇಡ ಎಂದು ನಿಯಮಾವಳಿ, ಗೈಡ್ ಲೈನ್ (ಮಾರ್ಗಸೂಚಿ) ರಚಿಸಿದ್ದೇ ಬಿಜೆಪಿ ಸರ್ಕಾರ. ಈಗ ಇವರೇ ಪ್ರತಿಭಟನೆ ಅಂತ ಫೋಟೋ ತೆಗೆಸಿಕೊಳ್ತಾ ಇದಾರೆ ಎಂದು ಸಿಎಂ ಲೇವಡಿ ಮಾಡಿದರು.
ಕೇಂದ್ರ ಸರ್ಕಾರವೇ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಈಗ ಅವರೇ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರಲ್ಲಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಕೆಂಡಾಮಂಡಲರಾದರು. ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರವು ಆಹಾರ ಭದ್ರತಾ ಕಾಯ್ದೆಯನ್ನು ಜಾರಿ ಮಾಡಿತ್ತು. ಆದರೆ, ಅದನ್ನು ಬಿಜೆಪಿ ವಿರೋಧಿಸಿತ್ತು. ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಮುರಳಿ ಮನೋಹರ ಜೋಶಿಯವರು ಆಹಾರ ಭದ್ರತೆ ಕಾಯ್ದೆಯನ್ನು ವಿರೋಧಿಸಿದ್ದರು. ಈಗ ಬಂದು ಅನ್ಯಾಯ... ಅನ್ಯಾಯ ಅಂತ ಸುಳ್ ಸುಳ್ಳೇ ಕರ್ನಾಟಕದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಬಿಪಿಎಲ್ ಕಾರ್ಡ್ ವಿಷಯದಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅನರ್ಹರ ಕಾರ್ಡ್ ಬದಲಿಸಲು ಆಕ್ಷೇಪವಿಲ್ಲ. ಆದರೆ, ರಾಜ್ಯ ಸರ್ಕಾರವು ಸಮರ್ಪಕ ಮಾನದಂಡವೇ ಇಲ್ಲದೆ ಪ್ಯಾನ್ ಕಾರ್ಡ್, ಆದಾಯ ತೆರಿಗೆ ವಿಚಾರಗಳನ್ನು ಮುಂದಿಟ್ಟುಕೊಂಡು 10 ರಿಂದ 20 ಲಕ್ಷ ಬಿಪಿಎಲ್ ಕಾರ್ಡ್‍ಗಳನ್ನು ವಜಾ ಮಾಡಿದೆ ಎಂದು ವಿಜಯೇಂದ್ರ ಅವರು ಟೀಕಿಸಿದ್ದರು.
Advertisement