ಬೆಂಗಳೂರು: ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ಅದೃಷ್ಟ ಇಲ್ಲ ಅನ್ನಿಸುತ್ತೆ, ನಿಖಿಲ್ ಅರ್ಜುನನ ಪಾತ್ರ ಮಾಡ್ತಾರೆ ಎಂದು ತಿಳಿದುಕೊಂಡಿದ್ದೆವು, ಆದರೆ ಜನ ಅವರನ್ನು ಅಭಿಮನ್ಯು ಪಾತ್ರದಲ್ಲಿ ಇರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಿಗ್ಗಾಂವಿಯಲ್ಲಿ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದು ಬಿಜೆಪಿ ಸೋಲಿಗೆ ಕಾರಣ. ನಾವು ಒಂದು ವರ್ಷ, ಆರು ತಿಂಗಳಿಂದಲೇ ಅಭ್ಯರ್ಥಿ ತಯಾರು ಮಾಡಿ ಬಿಟ್ಟಿದ್ದರೆ ಮೂರು ಕ್ಷೇತ್ರಗಳಲ್ಲಿ ಒಳ್ಳೆಯ ಫಲಿತಾಂಶ ಬರುತ್ತಿತ್ತು ನಾವು ಕೊನೆಯ ಹಂತದಲ್ಲಿ ಚುನಾವಣೆ ಘೋಷಣೆ ಆದ ಮೇಲೆ ಅಭ್ಯರ್ಥಿ ತಯಾರು ಮಾಡಿದ್ದು ಕೂಡಾ ಹಿನ್ನೆಡೆ ಆಯ್ತು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಕೊನೆಯವರೆಗೂ ನಾವು ಅಭ್ಯರ್ಥಿ ಘೋಷಿಸಿರಲಿಲ್ಲ. ಬೇಗ ಅಭ್ಯರ್ಥಿ ಘೋಷಣೆ ಮಾಡಿದ್ದು ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಿದೆ. ರಾಜೀನಾಮೆ ಕೊಟ್ಟ ಕೂಡಲೇ ನಮ್ಮ ಅಭ್ಯರ್ಥಿ ಘೋಷಣೆ ಮಾಡಿದ್ದರೆ ಗೆಲುವು ಆಗುತ್ತಿತ್ತು ಎಂದರು ಜೆಡಿಎಸ್ ಮತ್ತು ನಮ್ಮ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ಇದ್ದರಿಂದ ಮೇಲುಗೈ ಸಾಧಿಸಿದ್ದಾರೆ. ಈ ಹಿಂದೆ ನಾವು ಉಪಚುನಾವಣೆಯಲ್ಲಿ ಗೆದ್ದಿದ್ದೆವು. ಶಿಗ್ಗಾಂವಿಯಲ್ಲಿ ಮುಸ್ಲಿಂ ವೋಟ್‌ಗಳು ಕಾಂಗ್ರೆಸ್‌ಗೆ ವರದಾನವಾಗಿದೆ. ಬೊಮ್ಮಾಯಿ ಅವರು ಮಗ ಭರತ್‌ನನ್ನು ನಿಲ್ಲಿಸಲ್ಲ ಎಂದು ಹೇಳಿದ್ದರು. ಆದರೆ ಪಕ್ಷದ ಕೇಂದ್ರ ನಾಯಕರ ಒತ್ತಾಯದ ಮೇಲೆ ಮಗನನ್ನ ನಿಲ್ಲಿಸಿದ್ದರು ಎಂದು ತಿಳಿಸಿದರು.
ಮಹಾರಾಷ್ಟ್ರ, ಜಾರ್ಖಂಡ್ ಫಲಿತಾಂಶ ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಅಲ್ಲಿನ ಜನ ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಿದ್ದಾರೆ ಎಂದರು.
Advertisement