ಮೈಸೂರು: ಜೆಡಿಎಸ್ ಪರಿಸ್ಥಿತಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತ ಬಸವಿ ತರ ಆಗಿದೆ. ಬಿಜೆಪಿಯನ್ನ ಲವ್ ಮಾಡಿದ್ದು ಆಯಿತು. ಈಗ ಅವರನ್ನ ಅಲ್ಲೇ ಬಿಟ್ಟುಬಿಡಬೇಕು ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರು ಸೋಮವಾರ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ನಾನು ಕುಮಾರಸ್ವಾಮಿ ಜೊತೆಯಲ್ಲಿದ್ದಾಗ ಚನ್ನಪಟ್ಟಣದಲ್ಲಿ ನಾಲ್ಕು ಕೋಟಿ ಖರ್ಚು ಮಾಡಿ 20 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈಗ ನಾನು ಅವರ ಜೊತೆಯಲ್ಲಿಲ್ಲ, 150 ಕೋಟಿ ಖರ್ಚು ಮಾಡಿ 25 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಅಲ್ಲಿಗೆ ಮುಸ್ಲಿಮರು ಇರದಿದ್ದರೇ ಜೆಡಿಎಸ್ ಗೆ ಒಂದು ಸ್ಥಾನವೂ ಬರುವುದಿಲ್ಲ. ಅವತ್ತು 19 ಜನ ಗೆದಿದ್ದು ಮುಸ್ಲಿಮರಿಂದ ಎಂಬುದು ಈಗ ಸಾಬೀತಾಗಿದೆ ಎಂದರು.
ಈಗ ನಾವೇನು ಕಾಂಗ್ರೆಸ್ ಜೊತೆ ಹೋಗಲು ನಿರ್ಧಾರ ಮಾಡಿಲ್ಲ. ಆದರೆ ತೃತೀಯ ರಂಗ ಸ್ಥಾಪನೆಯ ಬಗ್ಗೆ ಮನಸ್ಸು ಮಾಡುತ್ತಿದ್ದೇವೆ ಅಷ್ಟೇ ಎಂದು ಸಿಎಂ ಇಬ್ರಾಹಿಂ ಸ್ಪಷ್ಟಪಡಿಸಿದರು.
ಜೆಡಿಎಸ್ನ 12 ರಿಂದ 13 ಶಾಸಕರು ಪಕ್ಷದ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ಜಿ.ಟಿ.ದೇವೇಗೌಡರಂತೆ ಹಲವು ಶಾಸಕರು ನೋವು ನುಂಗಿಕೊಂಡಿದ್ದಾರೆ. ನಾನು ಈಗ ಅವರನ್ನೆಲ್ಲ ಒಗ್ಗೂಡಿಸುವ ಕೆಲಸ ಶುರು ಮಾಡಿದ್ದೇನೆ. ಮುಂದೆ ಏನೇನಾಗುತ್ತೆ ನೋಡೋಣ. ನಾನು ಈಗಲೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ. ನಮ್ಮ ಶಾಸಕರ ನೋವು ನಿವಾರಿಸುವ ಜವಾಬ್ದಾರಿ ನನ್ನದಾಗಿದೆ. ನಾವು ಜೆಡಿಎಸ್ ಹೆಸರಿನಲ್ಲಿ ಇರಬೇಕಾ ಎಂದು ಚರ್ಚಿಸುತ್ತೇವೆ. ತೃತೀಯ ರಂಗಕ್ಕೆ ಬೇರೆ ಹೆಸರು ಕೊಡಬೇಕಾ ಎಂದು ಚರ್ಚೆ ನಡೆಸುತ್ತವೆ ಎಂದು ಹೇಳಿದರು.
ಈಗ ಇರುವ ಜೆಡಿಎಸ್ ಮನೆಗೆ ಬೆಂಕಿ ಬಿದ್ದಾಗಿದೆ. ಜೆಡಿಎಸ್ ಶಾಸಕರು ಅವರವರ ಕ್ಷೇತ್ರ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಒಬ್ಬೊಬ್ಬರೇ ತಮ್ಮ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಈಗಲಾದರೂ ಬುದ್ಧಿ ಕಲಿಯಬೇಕು. ಜೆಡಿಎಸ್ ಪಕ್ಷ ಫ್ಯಾಮಿಲಿ ಕಂಪನಿ ಮಾಡುವುದನ್ನು ಬಿಡಬೇಕು. ಆಗ ಮಾತ್ರ ಜೆಡಿಎಸ್ ಉಳಿಯಲು ಸಾಧ್ಯ ಎಂದು ಸಲಹೆ ನೀಡಿದರು.
Advertisement