ಹಾಸನ: ಇತ್ತೀಚಿಗೆ ನಡೆದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಆಡಳಿತರೂಢ ಕಾಂಗ್ರೆಸ್ ಇದೀಗ ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲೂ ಗೆದ್ದು ಬೀಗಿದೆ.
ಅರಸೀಕೆರೆ ನಗರಸಭೆ ವಾರ್ಡ್‌ಗಳ ಉಪಚುನಾವಣೆಯಲ್ಲಿ ಎಂಟು ಸ್ಥಾನಗಳ ಪೈಕಿ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಮೂಲಕ ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನದಲ್ಲೂ ಕಾಂಗ್ರೆಸ್ ಶಾಕ್ ಕೊಟ್ಟಿದೆ.
ಕಳೆದ ನವೆಂಬರ್ 23 ರಂದು ಅರಸೀಕೆರೆ ನಗರಸಭೆಯ 8 ವಾರ್ಡ್‌ಗಳಿಗೆ ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಿದೆ. ಎಂಟು ಸ್ಥಾನಗಳ ಪೈಕಿ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿವೆ.
ಇದರೊಂದಿಗೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಮಾಜಿ ಸಚಿವ ಎಚ್ಡಿ ರೇವಣ್ಣ ಅವರಿಗೆ ಶಾಕ್ ಕೊಟ್ಟಿದ್ದಾರೆ.
ಆರು ವಾರ್ಡ್‌ಗಳಲ್ಲಿ ಜೆಡಿಎಸ್, ನಾಲ್ಕರಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಕೆಲ ವಾರ್ಡ್‌ನಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ದೋಸ್ತಿಗಳಿಗೆ ತೀವ್ರ ಹಿನ್ನಡೆಯಾಗಿದೆ.
ಜೆಡಿಎಸ್‌ನಿಂದ ಗೆದ್ದು, ಬಿಜೆಪಿ ಜೊತೆ ಗುರುತಿಸಿಕೊಂಡ ಆರೋಪದಲ್ಲಿ ಏಳು ಸದಸ್ಯರು ಅನರ್ಹಗೊಂಡಿದ್ದರು. ಒಂದು ಸ್ಥಾನ ರಾಜೀನಾಮೆಯಿಂದ ತೆರವಾಗಿತ್ತು. ಹೀಗಾಗಿ ಒಟ್ಟು ಎಂಟು ಸ್ಥಾನಗಳಿಗೆ ನವೆಂಬರ್ 23 ರಂದು ಉಪ ಚುನಾವಣೆ ನಡೆದಿತ್ತು.
Advertisement