ಸಂಪುಟ ಪುನಾರಚನೆ ಸಂಚಲನ: ಡಿಕೆ ಶಿವಕುಮಾರ್ ಬೆನ್ನಲ್ಲೇ ನಾಳೆ ಸಿದ್ದರಾಮಯ್ಯ ದೆಹಲಿಗೆ ಭೇಟಿ!

ಸಂಪುಟ ಪುನಾರಚನೆ ಮಾತುಗಳು ಕೇಳಿಬರುತ್ತಿವೆ. ಯಾವಾಗ ಮಾಡ್ತಾರೆ ಎಂಬುದು ಗೊತ್ತಿಲ್ಲ. ಆದರೆ, ಕೆಲ ಖಾತೆಗಳು, ಸಚಿವರ ಬದಲಾವಣೆಯ ಸುದ್ದಿಯಿದೆ.
DK Shivakumar, CM Siddaramaiah, Satish Jorkiholi
ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ
Updated on

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸಂಪುಟ ಪುನಾರಚನೆಗೆ ಸಂಬಂಧಿಸಿದ ವದಂತಿಗಳು ಸಂಚಲನಕ್ಕೆ ಕಾರಣವಾಗಿರುವಂತೆ ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಬುಧವಾರ ನೀಡಿರುವ ಹೇಳಿಕೆಯೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಂಪುಟ ಪುನಾರಚನೆಯ ಮಾತುಗಳು ನಡೆಯುತ್ತಿವೆ. ಆದರೆ, ಅದು ಯಾವಾಗ ನಡೆಯುತ್ತದೆ ಎಂಬುದು ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಸಂಪುಟ ಪುನಾರಚನೆ ಸಾಧ್ಯತೆಯ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಪುನಾರಚನೆ ಮಾತುಗಳು ಕೇಳಿಬರುತ್ತಿವೆ. ಯಾವಾಗ ಮಾಡ್ತಾರೆ ಎಂಬುದು ಗೊತ್ತಿಲ್ಲ. ಆದರೆ, ಕೆಲ ಖಾತೆಗಳು, ಸಚಿವರ ಬದಲಾವಣೆಯ ಸುದ್ದಿಯಿದೆ. ಇಂತಹ ಚರ್ಚೆಗಳು ನಡೆಯುತ್ತಿವೆ. ಆದರೆ ಯಾವಾಗ ಆಗುತ್ತದೆ ಎಂಬುದು ಗೊತ್ತಿಲ್ಲ, ನಾನು ಏನನ್ನೂ ಕೇಳಿಲ್ಲ. ಯಾರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು, ಹೇಗೆ ಎಂಬುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

ಕಾರ್ಯದಕ್ಷತೆ ಆಧಾರದ ಮೇಲೆ ಸಂಪುಟ ಪುನಾರಚನೆ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇರಬಹುದು. ಕೆಲವರ ದಕ್ಷತೆ ಬಗ್ಗೆ ನಾಯಕರಿಗೆ ಅಸಮಾಧಾನ ಇರಬಹುದು ಅಥವಾ ಈಗ ಇರುವ ಸಚಿವರೊಂದಿಗೆ ಅವರು ಮುಂದುವರೆಯಬಹುದು ಮತ್ತು ಮಾಡದೇ ಇರಬಹುದು. ಏನನ್ನೂ ಹೇಳಲೂ ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಅನೇಕ ಹಿರಿಯ ನಾಯಕರಿದ್ದಾರೆ ಎಂದರು. ಒಂದು ವೇಳೆ ಸಂಪುಟ ಪುನಾರಚನೆಯಾದರೆ ತಮ್ಮ ಖಾತೆ ತೊರೆಯಲು ಸಚಿವರು ಸಿದ್ಧರಿದ್ದಾರೆಯೇ ಎಂಬ ಪ್ರಶ್ನೆಗೆ, ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ. ದೆಹಲಿಯಿಂದ ಪಟ್ಟಿ ಬಂದರೆ ಅಲ್ಲಿಗೆ ಕಥೆ ಮುಗಿಯಿತು. ಯಾರು ಇರಬೇಕು, ಇರಬಾರದು ಎಂಬುದು ದೆಹಲಿಯಲ್ಲಿ ಅಂತಿಮವಾಗಲಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಫಲಿತಾಂಶ ಬಂದಾಗಿನಿಂದಲೂ ಸಂಪುಟ ಪುನಾರಚನೆ ಬಗ್ಗೆ ವದಂತಿಗಳು ಕೇಳಿಬರುತ್ತಲೇ ಇವೆ. ಸಚಿವಾಕಾಂಕ್ಷಿ ಶಾಸಕರು ತಮ್ಮಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕೆಲವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ದೆಹಲಿ ಭೇಟಿಯೂ ಕುತೂಹಲಕ್ಕೆ ಕಾರಣವಾಗಿದೆ. ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿದ್ದು, ನಾಳೆ ಸಂಜೆ ಮುಖ್ಯಮಂತ್ರಿ ಕೂಡಾ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ.

ಈ ಮಧ್ಯೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟದ್ದು, ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಮತ್ತು ಹೈಕಮಾಂಡ್ ಜೊತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ಗೊತ್ತಿಲ್ಲ ಎಂದರು.

DK Shivakumar, CM Siddaramaiah, Satish Jorkiholi
ಅಧಿವೇಶನದ ನಂತರ ಸಂಪುಟ ಪುನಾರಚನೆ: ಹಲವರಿಗೆ ಕೊಕ್; ಹಿಟ್ ಲಿಸ್ಟ್ ನಲ್ಲಿ ಮಧು, ರಾಜಣ್ಣ, ಸುಧಾಕರ್!

ಶಿವಮೊಗ್ಗದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆ ನಡೆದಿಲ್ಲ. ಆದರೆ ಪ್ರತಿಯೊಬ್ಬರು ಅದಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು. ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 2 ವರ್ಷಗಳ ನಂತರ ಸಂಪುಟ ಪುನಾರಚನೆಯಾದರೆ ಒಳ್ಳೆಯದು, ಏಕೆಂದರೆ ಇತರರಿಗೆ ಅವಕಾಶ ನೀಡಬೇಕಾಗುತ್ತದೆ. ಇದೇ ಉದ್ದೇಶದಲ್ಲಿ ಡಿಕೆಶಿ ಆ ರೀತಿಯ ಹೇಳಿಕೆ ನೀಡಿರಬಹುದು. ನಾವೊಬ್ಬರೇ ಮುಂದುವರೆಯುವುದು ಸರಿಯಲ್ಲ. ಇತರರು ಸಚಿವರಾಗಬೇಕು. ಅದಕ್ಕೆ ಎಲ್ಲರೂ ಸಿದ್ದರಾಗಬೇಕು ಎಂದರು.

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿ ಕಂಡುಬರುತ್ತಿರುವ ಸತೀಶ್ ಜಾರಕಿಹೊಳಿ, ಪಕ್ಷದ ಅಧ್ಯಕ್ಷ ಸ್ಥಾನ ಅಂದುಕೊಂಡಷ್ಟು ಸುಲಭವಲ್ಲ. ಅದು ಕಷ್ಟದ ಕೆಲಸ. ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಪ್ರತಿಯೊಬ್ಬರ ಸಹಕಾರ ಅಗತ್ಯವಿರುತ್ತದೆ. ಆದರೆ, ಇಲ್ಲಿಯವರೆಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ನಡೆದಿಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com