ಆಂತರಿಕ ಭದ್ರತಾ ವಿಭಾಗದಿಂದ ಫೋನ್ ಕದ್ದಾಲಿಕೆ: JDS ಮಾಜಿ ಶಾಸಕ ರಮೇಶ್ ಗೌಡ ಆರೋಪ
ಬೆಂಗಳೂರು: ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಜೆಡಿಎಲ್ ಮಾಜಿ ಎಂಎಲ್‌ಸಿ ಹಾಗೂ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್‌ಎಂ ರಮೇಶ್ ಗೌಡ ಅವರು ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ,
ಚನ್ನಪಟ್ಟಣ ಉಪಚುನಾವಣೆ ಖರ್ಚಿಗಾಗಿ 50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಉದ್ಯಮಿ ವಿಜಯ್ ತಾತಾ ಕೊಟ್ಟಿರುವ ದೂರಿಗೆ ವಿರುದ್ಧವಾಗಿ ರಮೇಶ್ ಗೌಡ ಅವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರತಿ ದೂರು ದಾಖಲಿಸಿದರು.
ದೂರು ಬಳಿಕ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಗೌಡ ಅವರು, ವಿಜಯ್ ತಾತಾನಿಂದ ಅನೇಕರಿಗೆ ಮೋಸವಾಗಿದ್ದು, ಮೋಸ ಹೋದವರಿಗೆ ನ್ಯಾಯ ಕೊಡಿಸಲು ವಿಶೇಷ ತನಿಖಾ ತಂಡ (ಎಸ್ ಐಟಿ) ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಅನೇಕರಿಗೆ ವಿಜಯ್ ತಾತಾ ಮೋಸ ಮಾಡಿದ್ದಾರೆ. ಆ ವ್ಯಕ್ತಿಯ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ವಂಚನೆಯೇ ಅವರ ಪ್ರವೃತ್ತಿ ಆಗಿದ್ದು, ವಿಶೇಷ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಅಲ್ಲದೆ; ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ. ಪೊಲೀಸ್ ಆಯುಕ್ತರಿಗೆ ನಾನು ದೂರು ನೀಡುತ್ತೇನೆ. ಈ ಬಗ್ಗೆಯೂ ತನಿಖೆ ನಡೆಯಬೇಕು. ಪೊಲೀಸ್ ಠಾಣೆಯಲ್ಲಿ ಸ್ವತಃ ವಿಜಯ್ ತಾತಾನೇ ನನಗೆ ಹೇಳಿದ್ದಾರೆ. ಕುಮಾರಸ್ವಾಮಿ ಮತ್ತು ನಿಮ್ಮ ಮೇಲೆ ಕೇಸು ದಾಖಲಿಸಲು ನನ್ನ ಮೇಲೆ ಸಿಎಂ ಕಚೇರಿ ಹಾಗೂ ಕೆಲ ಸಚಿವರ ಒತ್ತಡ ಇದೆ ಎಂದು ಹೇಳಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಿ ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಅವರು ಹಾಗೂ ನನ್ನ ಮೇಲೆ ವಿಜಯ್ ತಾತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ಮೇಲೆ ನಾನು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ಕೊಡಲು ಹೋದಾಗ ವಿಜಯ್ ತಾತಾ ಆ ಠಾಣೆಯಲ್ಲಿಯೇ ಇದ್ದರು. ನಾನು ಆಗ ಇನ್ಸ್ಪೆಕ್ಟರ್ ಮುಂದೆಯೇ ಕೇಳಿದೆ, ಯಾಕೆ ಸುಳ್ಳು ದೂರು ಕೊಡುತ್ತೀಯಾ? ಇದು ಸರೀನಾ? ಎಂದು ಕೇಳಿದೆ. ಅದಕ್ಕೆ ವಿಜಯ್ ತಾತಾ, ನನ್ನ ಮೇಲೆ ಒತ್ತಡ ಇದೆ ಎಂದು ಹೇಳಿದ ಎಂದು ರಮೇಶ್ ಗೌಡ ಹೇಳಿದರು.
ನಾನು ದೂರು ದಾಖಲಿಸಿದರೆ ಎಫ್ಐಆರ್ ಹಾಕುತ್ತಿಲ್ಲ. ವಿಜಯ್ ತಾತಾ ದೂರು ಕೊಟ್ಟಿದ್ದು ಎಫ್ಐಆರ್ ಆಗಿದೆ. ಇದೀಗ ಪೊಲೀಸರ ಎದುರು ಧರಣಿ ಕೂರಲು ನಿರ್ಧರಿಸಿದ್ದಾರೆ. ನಾನು ಕೂಡ ಎಲ್ಲಾ ಸಚಿವರ ವಿರುದ್ಧ ದೂರು ನೀಡದರೆ, ಎಫ್ಐಆರ್ ದಾಖಲಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಏತನ್ಮಧ್ಯೆ ಶುಕ್ರವಾರ ರಮೇಶ್ ಗೌಡ ಹಾಗೂ ಇತರೆ ಜೆಡಿಎಸ್ ಮುಖಂಡರು ನಗರ ಪೊಲೀಸ್ ಆಯುಕ್ತರ ಕಚೇರಿ ಎದರು ಪ್ರತಿಭಟನೆ ನಡೆಸಿದ್ದು, ವಿಜಯ್ ತಾತಾ ವಿರುದ್ಧ ದೂರು ದಾಖಲಿಸಿಕೊಳ್ಳದ ಅಮೃತಹಳ್ಳಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ