ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡುವಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಮೈಸೂರಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ, ಸಚಿವ ಮಹದೇವಪ್ಪ ಹಾಗೂ ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ದಸರಾ ಮಹೋತ್ಸವದ ನಿಮಿತ್ತ ಮೈಸೂರಿಗೆ ಭೇಟಿ ನೀಡಿರುವ ಜಾರಕಿಹೊಳಿಯವರು ಈ ವೇಳೆ ಸಚಿವರು, ಶಾಸಕರು ಹಾಗೂ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಇದೇ ವೇಳೆ ಚಾಮರಾಜನಗರ ಸಂಸದ ಸುನೀಲ್ ಬೋಸ್ ಮನೆಯಲ್ಲಿ ʻಅಹಿಂದʼ ನಾಯಕರ ಡಿನ್ನರ್ ಮೀಟಿಂಗ್‌ನಲ್ಲೂ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ.
ಮುಡಾ ಹಗರಣದಲ್ಲಿ ತಾವು ನಿರಪರಾಧಿಯಾಗಿದ್ದು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರುಚ್ಛರಿಸುತ್ತಿದ್ದರೂ, ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ಪದೇ ಪದೇ ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಮೈಸೂರಿನಲ್ಲಿ ನಿನ್ನೆ ನಡೆದ ಡಿನ್ನರ್ ಮೀಟಿಂಗ್ ನಲ್ಲಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದು, ಮೂವರು ಹಿರಿಯ ಸಚಿವರು ಡಿನ್ನರ್ ನೆಪದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿರುವ ಸತೀಶ್ ಜಾರಕಿಹೊಳಿ ಅವರು, ದೆಹಲಿ ಭೇಟಿಯ ನಂತರ ಫುಲ್ ಅಲರ್ಟ್ ಆಗಿ ರಾಜ್ಯದ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.
ಸತೀಶ್ ಜಾರಕಿಹೊಳಿಯವರು ನಿನ್ನೆ ಬೆಳಿಗ್ಗೆಯಿಂದಲೂ ಮೈಸೂರಿನಲ್ಲಿಯೇ ಇದ್ದರು. ತಡರಾತ್ರಿ ಸಚಿವ ಮಹದೇವಪ್ಪ ಮನೆಯಲ್ಲಿ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ.
ಮೈಸೂರು ಭೇಟಿ ವೇಳೆ ಜಾರಕಿಹೊಳಿಯವರು ಮೊದಲಿಗೆ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ಅವರ ಸುಣ್ಣದ ಕೇರಿಯಲ್ಲಿ ಮನೆಗೆ ಭೇಟಿ ನೀಡಿ, ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದರು.
ಇದೇ ವೇಳೆ ಹೆಚ್'ಡಿ.ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಜಂಗಲ್ ಲಾಡ್ಜ್ ಅಧ್ಯಕ್ಷ ಅನಿಲ್ ಚಿಕ್ಕಮಾದು ಅವರು, ಸಚೀಶ್ ಜಾರಕಿಹೊಳಿ ಭೇಟಿಯಾದರು.
ನಂತರ ಕೆಜಿ ಕೊಪ್ಪಲಿನಲ್ಲಿರುವ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಅವರ ಮನೆಗೆ ಭೇಟಿ ನೀಡಿದ ಸಚಿವರು, ಈ ವೇಳೆ ಕೆ.ಹರೀಶ್ ಗೌಡ, ಕೆ.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ರವಿಶಂಕರ್, ಮುಡಾ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಶಾಸಕ ಎಂಕೆ. ಸೋಮಶೇಖರ್ ಅವರೊಂದಿಗೆ ಮಾತುಕತೆ ನಡೆಸಿದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿಯವರು, ಮೈಸೂರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಭೇಟಿ ನೀಡಿದೆ. ನೆರೆಹೊರೆಯವರಾಗಿರುವುದರಿಂದ ಮಹದೇಹವಪ್ಪ ಅವರನ್ನು ಭೇಟಿ ಮಾಡಿದೆ. ಇದರಲ್ಲಿ ವಿಶೇಷವೇನೂ ಇಲ್ಲ. ರಾಜಕಾರಣಿಗಳು ಭೇಟಿಯಾದಾಗ ರಾಜಕೀಯದ ಬಗ್ಗೆ ಚರ್ಚೆ ಮಾಡುವುದು ಸಾಮಾನ್ಯ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿದ್ದು, ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪುನರುಚ್ಛರಿಸಿದರು.
ನಾಯಕತ್ವ ಬದಲಾವಣೆ ಕುರಿತು ಗೊಂದಲಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಹೈಕಮಾಂಡ್ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ಕೂಡಲೇ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ, ಇದು ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಹಾನಿಯುಂಟು ಮಾಡಲಿದೆ. ಮುಂಬರುವ ಪಂಚಾಯತ್ ಹಾಗೂ ಸ್ಥಳೀಯ ಚುನಾವಣೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
Advertisement