
ಬೆಂಗಳೂರು: ಮುಡಾ ಹಗರಣ ಮರೆ ಮಾಚಲು ಜಾತಿಗಣತಿ ಮುನ್ನಲೆಗೆ ತಂದಿದ್ದಾರೆಂದು ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿರುವ ಬಿಜೆಪಿ ಇದೀಗ ಬ್ರಹ್ಮಾಸ್ತ್ರವೊಂದನ್ನು ಪ್ರಯೋಗಿಸಲು ಮುಂದಾಗಿದೆ.
ಜಾತಿಗಣತಿ ವರದಿ ಮಂಡನೆ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇದೇ ವೇಳೆ ಒಳ ಮೀಸಲಾತಿ ಜಾರಿ ತರುವಂತೆ ಆಗ್ರಹಿಸಿ ರಾಜ್ಯವ್ಯಾಪಿ ಜನಾಂದೋಲನ ನಡೆಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ಸಿಗರು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ, ಯಾರೂ ಮನೆಗೆ ಬಂದೇ ಇಲ್ಲ ಎಂಬುದಾಗಿ ಲಿಂಗಾಯತ, ಒಕ್ಕಲಿಗ ಸೇರಿದಂತೆ ಇತರೆ ಸಮುದಾಯದವರು ತಿಳಿಸಿದ್ದಾರೆ. ಕೆಲವೇ ಜಾತಿಗಳ ವೈಭವೀಕರಣ ಮತ್ತು ಇನ್ನೂ ಕೆಲವು ಜಾತಿಗಳ ಮೇಲೆ ದ್ವೇಷ ಮತ್ತು ಅವೈಜ್ಞಾನಿಕತೆ ಕಂಡು ಬಂದಿದೆ ಎಂದು ಆರೋಪಿಸಿದರು.
ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಅವರು, ವರದಿ ಬಗ್ಗೆ ಬಾಯಿ ಬಿಡಲಿಲ್ಲ. ಒಂದು ಕಡೆ ಮುಡಾ, ಮತ್ತೊಂದು ಕಡೆ ಇ.ಡಿ. ತನಿಖೆ, ಇನ್ನೊಂದೆಡೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಇವೆಲ್ಲವನ್ನೂ ಮುಚ್ಚಿ ಹಾಕಲು ಈಗ ವರದಿಯನ್ನು ಹೊರತೆಗೆಯಲಾಗಿದೆ. 10 ವರ್ಷವಾಗುತ್ತಿದ್ದರೂ ಜಾತಿ ಗಣತಿ ವರದಿ ಬಿಡುಗಡೆಯಾಗಿಲ್ಲ. ಕಾಂಗ್ರೆಸ್‌ನಲ್ಲಿಯೇ ವರದಿ ಬಿಡುಗಡೆಗೆ ವಿರೋಧ ಇದೆ. ಅವರ ಪಕ್ಷದಲ್ಲಿನ ಗೊಂದಲ ಬಗೆಹರಿಸುವುದು ಬಿಟ್ಟು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ ಈ ಕುರಿತು ಪ್ರಯತ್ನ ಮಾಡಿತ್ತು. ಮೀಸಲು ಪ್ರಮಾಣವನ್ನು ಪರಿಶಿಷ್ಟ ಜಾತಿಗೆ ಶೇ.3 ರಿಂದ ಶೇ.7 ಕ್ಕೆ ಏರಿಸಲಾಗಿತ್ತು. ಮೀಸಲಾತಿ ಹೆಚ್ಚಿಸಿ ಸಾಮಾಜಿಕ ನ್ಯಾಯ ನೀಡಿದ್ದೇ ಬಿಜೆಪಿ. ದಲಿತರು, ಹಿಂದುಳಿದವರ ಚಾಂಪಿಯನ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಹರ್ಯಾಣ ಚುನಾವಣೆಯಲ್ಲಿ ಸೋತಿದೆ. ಬಿಜೆಪಿ ಎಂದಿಗೂ ಮೀಸಲು ವಿಚಾರದಲ್ಲಿ ಹಿಂದುಳಿದಿಲ್ಲ. ದಲಿತರ ಅಭಿವೃದ್ಧಿಗೆ ಬಿಜೆಪಿ ಸದಾ ಶ್ರಮಿಸಿದೆ. ದಲಿತರ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎನ್ನುವುದಾದರೆ ಒಳ ಮೀಸಲಾತಿ ತರಲಿ ಎಂದು ಸವಾಲು ಹಾಕಿದರು.
ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ಮಾತನಾಡಿ, ಜಾತಿ ಗಣತಿ ವರದಿನ ಜಾರಿಗೊಳಿಸುವ ಸರ್ಕಾರದ ಕ್ರಮವು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮೇಲೆ ಪ್ರಭಾವ ಬೀರುವುದರಿಂದ, ನಿರ್ಧಾರಕ್ಕೂ ಮುನ್ನ ವರದಿಯನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು
Advertisement