
ಗದಗ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಶೀಘ್ರದಲ್ಲೇ ಈ ಕುರಿತ ಸತ್ಯ ಬಹಿರಂಗಗೊಳ್ಳಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಡಾ ನಿವೇಶನಗಳನ್ನು ವಾಪಸ್ ನೀಡಿದ್ದು, ಹೀಗಾಗಿ ಬಿಜೆಪಿ ನಾಯಕರು ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿಗಳು ಕೂಡ ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂದು ಹೇಳಿದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರೆಲ್ಲ ಇದೀಗ ಸಿಎಂ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಶಾಸಕರೇ, ಸಚಿವರೇ ಸಿಎಂ ಅಧಿಕಾರಾವಧಿ ವಿಚಾರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಮೇಲಾಗಿ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಮೂರು ವರ್ಷ ಇರತ್ತಾರಾ? ಐದು ವರ್ಷ ಇರತ್ತಾರಾ? ಅದನ್ನು ಹೈಕಮಾಂಡ್ ಗೆ ಕೇಳಬೇಕು ಎಂದು ತಿಳಿಸಿದರು.
ಈಗಾಗಲೇ ಶಾಸಕರು ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೆ. ಡಿಕೆಶಿ ದೇವರ ಪೂಜೆ ಮಾಡಿ ಬಳಿಕ ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆ ಎಂದು ಹೇಳತ್ತಾರೆ. ಆದರೆ, ನಿಜವಾಗಿಯೂ ಸಿಎಂ ರೇಸ್ ನಲ್ಲಿ ಡಿಕೆಶಿ ಇದ್ದಾರೆ ಎಂದರು.
ವಾಲ್ಮೀಕಿ, ಮುಡಾ ಹಗರಣ ಸಂಬಂಧಿಸಿದಂತೆ ಮೈಸೂರಿನವರೆಗೆ ಪಾದಯಾತ್ರೆ ಮಾಡಿದ್ದೇವೆ. ಇದರ ಪರಿಣಾಮವಾಗಿ ನಮಗೆ ಮೊದಲ ಜಯ ಸಿಕ್ಕಿದೆ. ಈಗಾಗಲೇ ಸಿಎಂ ಕುರ್ಚಿ ಅಲುಗಾಡುತ್ತಿದೆ. ಸಿದ್ದರಾಮಯ್ಯ ಅವರ ಬಂಡತನ ಬಹಳ ದಿನ ನಡೆಯೋದಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಜಾತಿಗಣತಿ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಅವರು ನಿಜವಾಗಿಯೂ ಪ್ರಾಮಾಣಿಕರೇ ಆಗಿದ್ದರೇ 2018 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಅನುಷ್ಠಾನ ಮಾಡಬೇಕಿತ್ತು. ಇದೀಗ ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಸರ್ಕಾರವನ್ನು ಉಳಿಸಲು ಜಾತಿಗಣತಿ ದಾಳವನ್ನು ಉರುಳಿಸಿದ್ದಾರೆ ಎಂದರು.
ಈಗಾಗಲೇ ಜಾತಿಗಣತಿಯನ್ನು ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಖರ್ಗೇ ಅಂತಹ ನಾಯಕರೇ ಇದೊಂದು ಅವೈಜ್ಞಾನಿಕ ಎಂದು ಹೇಳಿದ್ದಾರೆ. ಹೀಗಾಗಿ ಸದನದಲ್ಲಿ ಜಾತಿಗಣತಿ ಅನುಷ್ಠಾನ ಮಾಡುವುದು ಸಿದ್ದರಾಮಯ್ಯ ಅವರ ಭ್ರಮೆ ಎಂದರು.
ವಿಜಯೇಂದ್ರ ಹೈಕಮಾಂಡ್ ಗೆ ಮಂಕುಬುದ್ದಿ ಎರಚಿ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನು ಹೈಕಮಾಂಡ್ ಗೆ ಮಂಕುಬುದ್ದಿ ಎರಚುವಷ್ಟು ದೊಡ್ಡವನು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದರೆ ಸಂತೋಷ. ಆದರೆ ಪಕ್ಷದ ಬಗ್ಗೆ ಮಾತಾನಾಡುವ ನೈತಿಕತೆ ಅವರಿಗಿಲ್ಲ ಎಂದು ಹರಿಹಾಯ್ದರು.
ಈ ನಡುವೆ ಗದಗದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಜಿಲೇಬಿ ಹಾಗೂ ಪುಷ್ಪಗಳನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ವಿಜಯೇಂದ್ರ ಪಟ್ಟಣಕ್ಕೆ ಆಗಮಿಸಿದಾಗ ಬಿಜೆಪಿಯ ಹಲವು ಮಹಿಳಾ ಕಾರ್ಯಕರ್ತರು ಜಿಲೇಬಿ ನೀಡಿದರು,
ಕಾಂಗ್ರೆಸ್ ಗೆದ್ದರೆ ಜಿಲೇಬಿ ನೀಡುವುದಾಗಿ ಹರ್ಯಾಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದರು. ಇದೀಗ ಆ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಜಿಲೇಬಿಯನ್ನೇ ಹಂಚಿ ಸಂಭ್ರಮ ಪಡುತ್ತಿದ್ದಾರೆಂದು ಹೇಳಿದರು.
Advertisement