ಬೆಂಗಳೂರು: ನೀವು ಜಾಹೀರಾತು ನೀಡುವುದರಿಂದ ನೀವು ಮಾಡಿರುವ ಪಾಪಕರ್ಮ, ಭ್ರಷ್ಟಾಚಾರಗಳು ಪರಿಹಾರವಾಗುವುದಿಲ್ಲ ಎಂದು ರಾಜ್ಯ ಸರ್ಕಾರದ ಜಾಹೀರಾತಿಗೆ ಬಿಜೆಪಿ ಟಾಂಗ್ ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ನವರಾತ್ರಿ ಎಂಬುದಕ್ಕೆ ಹಿಂದೂ ಧರ್ಮದಲ್ಲಿ ಪೌರಾಣಿಕ ಮಹತ್ವವಿದೆ. ದುರ್ಗೆಯ ನವ ಅವತಾರಗಳನ್ನು ಆರಾಧಿಸುವ ಈ ಹಬ್ಬವನ್ನು ಭ್ರಷ್ಟ ಮುಖ್ಯಮಂತ್ರಿ, ಮುಡಾ ಹಗರಣದ ಎ1 ಆರೋಪಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿರುವುದು ಅಕ್ಷಮ್ಯ ಎಂದು ಕಿಡಿಕಾರಿದೆ.
ಆರೋಪಿ ಸಿದ್ದರಾಮಯ್ಯ ಅವರೇ, ಈ ರೀತಿ ಜಾಹೀರಾತು ನೀಡುವುದರಿಂದ ನೀವು ಮಾಡಿರುವ ಪಾಪಕರ್ಮ, ಭ್ರಷ್ಟಾಚಾರಗಳು ಪರಿಹಾರವಾಗುವುದಿಲ್ಲ. ರಾಮ ಸತ್ಯನೇ, ಆದರೆ ಸಿದ್ದರಾಮಯ್ಯ ಬ್ರಹ್ಮಾಂಡ ಸುಳ್ಳು. ಶ್ರೀರಾಮ ಸತ್ಯ ಅನ್ವೇಷಣೆಗಾಗಿ ಸೀತೆಯಿಂದ ದೂರವಾಗಿ ಸತ್ಯಶೋಧನೆ ನಡೆಸಿದ್ದ. ಅದೇ ಮಾರ್ಗದಲ್ಲಿ ನೀವು ನಡೆಯುವುದಾದರೆ ಸಿಎಂ ಪದವಿಗೆ ರಾಜೀನಾಮೆ ಸಲ್ಲಿಸಿ ಸತ್ಯಶೋಧನೆಗೆ ಅವಕಾಶ ನೀಡಿ ಎಂದು ಹೇಳಿದೆ.
ದಸರಾ ಹಬ್ಬ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಶುಭಾಶಯ ಕೋರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ರಾಜ್ಯವನ್ನು ವಾಮಮಾರ್ಗ ಮತ್ತು ಮೋಸದಿಂದ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ನಿಗ್ರಹಿಸಿ, ನಾಡವಾಸಿಗಳಿಗೆ ಸುಖ-ಶಾಂತಿಯನ್ನು ಕರುಣಿಸಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿದ್ದರು.
Advertisement