
ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಯೋತ್ಪಾದಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆ ಸಂಬಂಧ ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ ಆರಂಭವಾಗಿದೆ.
ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುತ್ತದೆ ಎಂಬ ಪ್ರಹ್ಲಾದ್ ಜೋಶಿ ಅವರ ಇತ್ತೀಚಿನ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಜೋಶಿ ಅವರೇ ಭಯೋತ್ಪಾದಕ ಎಂದು ಹೇಳಿದರು.
ಹುಬ್ಬಳ್ಳಿ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದ ಜೋಶಿಯವರು, ಬ್ಬಳ್ಳಿ ಗಲಭೆ ಕೇಸ್ ವಾಪಾಸ್ ಪಡೆದು ಸಿಎಂ ಸಿದ್ದರಾಮಯ್ಯ ಭಯೋತ್ಪಾದಕರ ಬೆಂಬಲಿಗರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಬೆಂಬಲಿತ ಪಕ್ಷವಾಗಿದೆ ಎಂದು ಕಿಡಿಕಾರಿದ್ದರು,
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಪ್ರಹ್ಲಾದ್ ಜೋಶಿಯವರೇ ದೊಡ್ಡ ಭಯೋತ್ಪಾದಕ. ಹುಬ್ಬಳ್ಳಿ ಗಲಭೆ ಪ್ರಕರಣ ಸುಳ್ಳು ಪ್ರಕರಣವೆಂದು ನಿರ್ಧರಿಸಿ ಪ್ರಕರಣವನ್ನು ವಾಪಸ್ಸು ಪಡೆಯಲಾಗಿದೆ. ಈ ತೀರ್ಮಾನವನ್ನು ನ್ಯಾಯಾಲಯದ ಮುಂದೆ ಮಂಡಿಸಿದ ನಂತರವಷ್ಟೇ ಪ್ರಕರಣವನ್ನು ವಾಪಸ್ಸು ಪಡೆಯಲು ಸಾಧ್ಯ. ಇದೇ ರೀತಿ ಬಿಜೆಪಿಯವರ ವಿರುದ್ಧ ಪ್ರಕರಣಗಳನ್ನೂ ಸಹ ವಾಪಸ್ಸು ಪಡೆಯಲಾಗಿದೆ. ಬಿಜೆಪಿಯವರು ಕೂಡ ಹಲವು ಪ್ರಕರಣಗಳನ್ನು ವಾಪಾಸ್ ಪಡೆದಿದ್ದರು ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಈ ಹೇಳಿಕೆ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಸಿದ್ದರಾಮಯ್ಯ ಮಾನಸಿಕ ಸಮತೋಲನ ಕಳೆದುಕೊಂಡಿದ್ದು, ಶೀಘ್ರ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಅಧಿಕಾರ ಕೈತಪ್ಪಬಹುದು ಎಂಬ ಹತಾಶೆಯಲ್ಲಿರುವ ಸಿದ್ದರಾಮಯ್ಯ ಅವರು ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆಂದು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದ ಹಗರಣಗಳಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದು ಖಚಿತ, ಅಧಿಕಾರ ಕಳೆದುಕೊಳ್ಳುವ ದುಃಸ್ವಪ್ನ ಅವರನ್ನು ಕಾಡುತ್ತಿದ್ದು, ಹೀಗಾಗಿ ಹತಾಶರಾಗಿದ್ದಾರೆ ಎಂದು ಜೋಶಿ ಅವರು ಹೇಳಿದ್ದಾರೆ.
ರಾಜಕೀಯದಲ್ಲಿ ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ. ಈ ಹತಾಶೆಯಲ್ಲಿ ಸಿಎಂ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಮುಡಾ ಹಗರಣದಲ್ಲಿ ಕರ್ನಾಟಕ ಹೈಕೋರ್ಟ್ ಸಿಎಂಗೆ ಛೀಮಾರಿ ಹಾಕಿದ್ದು, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರ ಮೇಲೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿಂದ ಸಿದ್ದರಾಮಯ್ಯ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು,
Advertisement