
ಬೆಂಗಳೂರು: ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಸಚಿವ ಮತ್ತು ಬಿಜೆಪಿ ಎಂಎಲ್‌ಸಿ ಸಿಪಿ ಯೋಗೇಶ್ವರ ಅವರು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಉಪಚುನಾವಣೆಯಲ್ಲಿ ಸ್ಪರ್ಧೆಗಿಳಿಯಲೇಬೇಕೆಂದು ನಿರ್ಧರಿಸಿರುವ ಯೋಗೇಶ್ವರ್ ಅವರು, ಚುನಾವಣೆಗೆ ಸಿದ್ಥತೆಗಳನ್ನು ಆರಂಭಿಸಿದ್ದಾರೆ. ಇದರಂತೆ ಬುಧವಾರ ರಾಮನಗರದ ಖಾಸಗಿ ರೆಸಾರ್ಟ್‍ನಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡಿರುವ ಅವರು, ನಾನು ಬಿಜೆಪಿ ಅಭ್ಯರ್ಥಿಯಾಗಿ ಐದು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಒಂದು ಬಾರಿ ಗೆದ್ದಿದ್ದೇನೆ. ಡಿ.ಕೆ.ಶಿವಕುಮಾರ್ ಬೆಂಬಲದಿಂದ ದೇವೇಗೌಡರ ಕುಟುಂಬ ನನ್ನ ವಿರುದ್ಧ ನಿಂತಿತ್ತು. ಈ ಬಾರಿ ನನ್ನ ಬೆಂಬಲಿಗರು ನನ್ನನ್ನು ಸ್ವತಂತ್ರ ಶಾಸಕನನ್ನಾಗಿ ಮಾಡಬೇಕೆಂದು ನಿರ್ಧರಿಸಿದ್ದಾರೆ. ರಾಜಕೀಯ ಪಕ್ಷಗಳು ನನ್ನನ್ನು ಕೈಬಿಟ್ಟರೂ ಜನ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಮೂಲಕ ಎನ್‌ಡಿಎ ನನ್ನನ್ನು ತನ್ನ ಅಭ್ಯರ್ಥಿಯನ್ನು ಪರಿಗಣಿಸದಿದ್ದರೂ ಪಕ್ಷೇತರನಾಗಿ ಆದರೂ ಸ್ಪರ್ಧೆಗಿಳಿಯುವುದು ಖಚಿತ ಎಂದು ಸ್ಪಷ್ಟವಾಗಿ ಹೇಳಿದರು.
ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಲು ಬಯಸಿದ್ದು, ಯೋಗೇಶ್ವರ್ ಅವರಿಗೆ ಸ್ಥಾನ ಬಿಟ್ಟುಕೊಡುತ್ತಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು.
ಈ ವೇಳೆ ಮಾತನಾಡಿದ ಯೋಗೇಶ್ವರ್ ಅವರು, ನನಗೆ ಟಿಕೆಟ್ ಸಿಗದಿದ್ದರೆ, ನಮ್ಮ ಕಾರ್ಯಕರ್ತರು ಏನು ಹೇಳುತ್ತಾರೋ ಹಾಗೆಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ. ಆದರೆ, ಆತುರ ಪಡುವುದಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುವುದಿಲ್ಲ. ಆದುದರಿಂದ, ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಆತಂಕಪಡುವುದು ಬೇಡ ಎಂದು ತಿಳಿಸಿದರು.
ಹಳೆ ಮೈಸೂರಿನಲ್ಲಿ ಬಿಜೆಪಿ ಬೆಳೆಯಬೇಕಾದರೆ ನಾನು ಚುನಾವಣೆಯಲಲಿ ಸ್ಪರ್ಧಿಸಬೇಕು. ನಾನು ಈ ಭಾಗದ ಬಿಜೆಪಿಯ ಹಿರಿಯ ಸದಸ್ಯ. ಕುಮಾರಸ್ವಾಮಿ ಕೂಡ ಬುದ್ಧಿವಂತರು. ಎನ್‌ಡಿಎ ನಾಯಕರು ಎಲ್ಲರಿಗೂ ಮನವರಿಕೆ ಮಾಡಿ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಬಿಜೆಪಿ-ಜೆಡಿಎಸ್ ನಾಯಕರು ನನ್ನ ಹೆಸರನ್ನು ಅಂತಿಮಗೊಳಿಸಲಿದ್ದಾರೆಂದು ತಿಳಿದುಬಂದಿದೆ. ಪಕ್ಷದ ನಾಯಕರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಎರಡೂ ಪಕ್ಷಗಳ ನಾಯಕರ ಜತೆ ಚರ್ಚಿಸಿದ್ದೇನೆ. ಬಹುಶಃ ಒಂದೆರಡು ದಿನಗಳಲ್ಲಿ ಹೆಸರನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಈ ಹಿಂದೆಯೂ ಹಲವು ಬಾರಿ ಕುಮಾರಸ್ವಾಮಿ ಅವರೊಂದಿಗೆ ಹಾಗೂ ನಮ್ಮ ರಾಜ್ಯ ಮತ್ತು ಕೇಂದ್ರ ನಾಯಕರ ಜತೆ ಮಾತನಾಡಿದ್ದೇನೆ ಎಂದು ಹೇಳಿದರು.
ವಕೀಲ ಹನುಮಂತ ಅವರು ಮಾತನಾಡಿ, ಯೋಗೇಶ್ವರ್ ಬೆಂಗಳೂರು ಗ್ರಾಮಾಂತರ ಲೋಕಸಭೆ ಸ್ಥಾನವನ್ನು ತ್ಯಾಗ ಮಾಡಿದ್ದರು. ಕ್ಷೇತ್ರದಲ್ಲಿ ಡಾ.ಮಂಜುನಾಥ್ ಅವರು ಸ್ಪರ್ಧೆಗಿಳಿದು ಗೆಲುವು ಸಾಧಿಸಿದ್ದಾರೆ. ಇದೀಗ ಬಿಜೆಪಿ ಮಾತ್ರವಲ್ಲ, ಜೆಡಿಎಸ್ ಕಾರ್ಯಕರ್ತರು ಕೂಡ ಯೋಗೇಶ್ವರ್ ಅವರ ಪರ ಒಲವು ತೋರಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರು ಯೋಗೇಶ್ವರ್ ಅವರಿಗೆ ಅವಕಾಶ ನೀಡಬೇಕು. ಈಗಾಗಲೇ ಚನ್ನಪಟ್ಟಣ ಸಭೆಯಲ್ಲಿ ಕೆ.ಟಿ.ಜಯರಾಮ್ ಅವರು ಮೈತ್ರಿ ಧರ್ಮ ಪಾಲಿಸುವಂತೆ ಕುಮಾರಸ್ವಾಮಿಗೆ ಸಲಹೆ ನೀಡಿದ್ದು, ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಒಗ್ಗೂಡುವ ಕಾಲ ಹತ್ತಿರ ಬಂದಿದೆ ಎಂದು ಹೇಳಿದರು.
ಏತನ್ಮಧ್ಯೆ ಪ್ರಸಾದ್ ಗೌಡ, ಕುಣಿಗೆರೆ ರವಿ, ಗೌತಮ್ಮಗೌಡ ಸೇರಿದಂತೆ ಹಲವು ಸ್ಥಳೀಯ ಬಿಜೆಪಿ ಮುಖಂಡರು ಯೋಗೇಶ್ವರ ಅವರು ಟಿಕೆಟ್ ಪಡೆಯಲು ಅರ್ಹರಾಗಿದ್ದು, ಆರಾಮವಾಗಿ ಗೆಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಬುಧವಾರ ನಡೆದ ಸಭೆಯಲ್ಲಿ ಸಭೆಯಲ್ಲಿ ಯೋಗೇಶ್ವರ ಅವರ ಸಾಧನೆಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಈ ವೇಳೆ ಅವರ ಬೆಂಬಲಿಗರು ಯೋಗೇಶ್ವರ ಅವರನ್ನು ಮುಂದಿನ ಶಾಸಕ ಎಂದು ಘೋಷಣೆಗಳನ್ನು ಕೂಗಿದರು.
ಬಾಡೂಟ ಸೀಜ್
ಇನ್ನು ಯೋಗೇಶ್ವರ ಸಭೆ ನಡೆಸಿದ ಚನ್ನಪಟ್ಟಣ ಬಳಿಯ ರೆಸಾರ್ಟ್‌ನಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಮಾಂಸಾಹಾರಿ ಊಟವನ್ನು ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಬಿ.ಕೆ.ಬಿನೋಯ್ ನೇತೃತ್ವದಲ್ಲಿ ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡರು.
ನೀತಿ ಸಂಹಿತೆ ಜಾರಿಯಾದ ಬಳಿಕ ರಾಜಕೀಯ ಕಾರ್ಯಕ್ರಮ ನಡೆಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಚಿಕನ್ ಖಾದ್ಯಗಳು ಮತ್ತು ಬಿರಿಯಾನಿಗಳನ್ನು ತಯಾರಿಸಿರುವ ಕುರಿತು ಮಾಹಿತಿ ಪಡೆದ ರಾಮನಗರ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದರು.
ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮತ್ತು ಮತದಾರರಿಗೆ ನೀಡಿದ ಪ್ರಚೋದನೆಯಾಗಿರುವುದರಿಂದ ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
Advertisement