ಚನ್ನಪಟ್ಟಣ ಉಪ ಚುನಾವಣೆ: ಅಖಾಡಕ್ಕೆ ದೇವೇಗೌಡ ಎಂಟ್ರಿ; ನಿಖಿಲ್ ಪರ ಬಿರುಸಿನ ಪ್ರಚಾರಕ್ಕೆ ವೇದಿಕೆ ಸಜ್ಜು!

ಚನ್ನಪಟ್ಟಣ ಉಪಚುನಾವಣೆಯಲ್ಲಿ ಈ ಬಾರಿ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿರುವ ದೇವೇಗೌಡ ಅವರು, ಮೊಮ್ಮಗನ ಪರ ಪ್ರಚಾರ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಚಾರಕ್ಕೆ ವೇದಿಕೆ ಕೂಡ ಸಜ್ಜಾಗಿದೆ.
NDA candidate Nikhil Kumaraswamy campaigns in Channapatna on Sunday
ಚನ್ನಪಟ್ಟಣದಲ್ಲಿ ಪ್ರಚಾರ ನಡೆಸಿದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ.
Updated on

ಬೆಂಗಳೂರು: ಚನ್ನಪಟ್ಟಣದಲ್ಲಿ ನ.13ಕ್ಕೆ ನಡೆಯಲಿರುವ ಉಪಚುನಾವಣೆಯ ಎನ್‌ಡಿಎ ಅಭ್ಯರ್ಥಿ ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ಅವರು ಭಾನುವಾರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು, ಈ ಮೂಲಕ ತಮ್ಮ ಅಜ್ಜ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್'ಡಿ ದೇವೇಗೌಡ ಅವರು ಅಖಾಡಕ್ಕಿಳಿದು ಪ್ರಚಾರ ನಡೆಸಲು ವೇದಿಕೆ ಸಜ್ಜುಗೊಳಿಸಿದ್ದಾರೆ.

ಬೊಂಬೆನಗರಿ ಚನ್ನಪಟ್ಟಣವು ಬೊಂಬೆಗಳಿಗೆ ಮಾತ್ರವಲ್ಲ ಜಿದ್ದಾಜಿದ್ದಿನ ರಾಜಕಾರಣಕ್ಕೂ ಫೇಮಸ್‌. ಅದರಲ್ಲೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ರಾಜಕೀಯ ಜೀವನಕ್ಕೆ ಎರಡನೇ ಇನ್ನಿಂಗ್ಸ್‌ ಶುರು ಮಾಡಿದ್ದ ಕ್ಷೇತ್ರವಿದು. ಹೀಗಾಗಿ ಏನೇ ಆದರೂ ಜೆಡಿಎಸ್‌ ಪಾಲಿಗೆ ದೊಡ್ಡ ಶಕ್ತಿಯಾಗಿರುವ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯೂ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಲಿದೆ.

1999 ರಲ್ಲಿ ದೇವೇಗೌಡರ ಇಡೀ ಕುಟುಂಬವೇ ಸೋಲುಕಂಡಿದ್ದ ವೇಳೆಯಲ್ಲಿ ಎಚ್‌.ಡಿ.ದೇವೇಗೌಡ ಅವರಿಗೆ ರಾಜಕೀಯದಲ್ಲಿ ಸೆಕೆಂಡ್‌ ಇನ್ಸಿಂಗ್ಸ್‌ಗೆ ಕಾರಣವಾಗಿದ್ದು ಇದೇ ಚನ್ನಪಟ್ಟಣ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಈ ಬಾರಿ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿರುವ ದೇವೇಗೌಡ ಅವರು, ಮೊಮ್ಮಗನ ಪರ ಪ್ರಚಾರ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಚಾರಕ್ಕೆ ವೇದಿಕೆ ಕೂಡ ಸಜ್ಜಾಗಿದೆ.

ನಿನ್ನೆಯಷ್ಟೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ನಿಖಿಲ್ ಕುಮಾರಸ್ವಾಮಿಯವರು, ಚನ್ನಪಟ್ಟಣದಲ್ಲಿ ನನ್ನ ಸ್ಪರ್ಧೆ ಅನಿರೀಕ್ಷಿತ. ಕ್ಷೇತ್ರದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದ್ದೇನೆ. ನಾಮಪತ್ರ ಸಲ್ಲಿಸಿದ ನಂತರ ಇದೇ ಪ್ರಥಮ ಬಾರಿಗೆ ಇಂದು ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಜೊತೆ ಮತ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದರು.

NDA candidate Nikhil Kumaraswamy campaigns in Channapatna on Sunday
ಚನ್ನಪಟ್ಟಣ ಉಪ ಚುನಾವಣೆ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ: ಕುಮಾರಸ್ವಾಮಿ

ಕ್ಷೇತ್ರದ 3 ಪಂಚಾಯಿತಿಗಳ 16ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ಕುಮಾರಸ್ವಾಮಿಯವರು ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ದೇವೇಗೌಡರು ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದಾರೆ. ತಾಲೂಕಿನ ನೀರಾವರಿ ಯೋಜನೆಗೆ ಅವರ ಕೊಡುಗೆ ಶಾಶ್ವತವಾಗಿದೆ. ‘ನೀರಾ’ ಹೋರಾಟದ ವೇಳೆ ಶೂಟ್‌ಔಟ್‌ನಲ್ಲಿ ರೈತ ಕೃಷ್ಣೇಗೌಡ ಮೃತಪಟ್ಟಾಗ ಚನ್ನಪಟ್ಟಣದಿಂದ ಬೆಂಗಳೂರಿಗೆ ದೇವೇಗೌಡರು ಅವರು ಪಾದಯಾತ್ರೆ ಮಾಡಿದ್ದರು. ಅವರು ಮಾಡಿದ ಪಾದಯಾತ್ರೆಯನ್ನು ಹಿರಿಯ ರೈತರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಗೌಡರ ಕುಟುಂಬ ಮತ್ತು ಚನ್ನಪಟ್ಟಣವು ಪರಸ್ಪರ ಬಂಧ ಎಂದಿಗೂ ಕಳಚುವುದಿಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ರೈತರ, ಜನಸಾಮಾನ್ಯರ ಕಷ್ಟಗಳನ್ನು ನೋಡಿ ಕಣ್ಣೀರು ಹಾಕಿದರೆ ಅದಕ್ಕೆ ವ್ಯಂಗ್ಯವಾಗಿ ಕಣ್ಣೀರಿಗೆ ಮರುಳಾಗಬೇಡಿ ಎನ್ನುತ್ತಾರೆ, ನಮ್ಮ ತಾತ, ನಮ್ಮ ಅಪ್ಪಾಜಿ ಕಣ್ಣೀರು ಹಾಕುವುದು ನಮಗಾಗಿ ಅಲ್ಲ, ನಾಡಿನ ರೈತರಿಗಾಗಿ ಇದನ್ನು ತಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು,

ನನ್ನ ತಂದೆ ಮತ್ತು ಅಜ್ಜ ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತಿಸಬೇಕು ಎಂದು ನನಗೆ ಕಲಿಸಿದರು. ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿರಲಿಲ್ಲ. ಎರಡು ಚುನಾವಣೆಗಳಲ್ಲಿ ಸೋತರೂ (2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಲ್ಲಿ) ಪಕ್ಷದ ಹಿತಾಸಕ್ತಿಯು ಮೊದಲ ಸ್ಥಾನದಲ್ಲಿದ್ದುದರಿಂದ ಸ್ಪರ್ಧೆಗಿಳಿಯಲೇ ಬೇಕಾಯಿತು.

ಮಂಡ್ಯ ಹಾಗೂ ರಾಮನಗರದಲ್ಲಿ ಈಗಾಗಲೇ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಒಬ್ಬ ಯುವಕನಾಗಿ, ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಅದಕ್ಕೆ ಕ್ಷೇತ್ರದ ಜನ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

NDA candidate Nikhil Kumaraswamy campaigns in Channapatna on Sunday
ಚನ್ನಪಟ್ಟಣ ಉಪ ಚುನಾವಣೆ: ಗೆದ್ದರೆ ಡಿಕೆಶಿ ಸಿಎಂ; ಒಕ್ಕಲಿಗರ ಮತ ಸೆಳೆಯಲು 'ಕೈ' ಕಸರತ್ತು!

ನನಗೆ ಸೇಡಿನ ರಾಜಕೀಯ, ಜಿದ್ದಾಜಿದ್ದಿನ ರಾಜಕೀಯದಲ್ಲಿ ನಂಬಿಕೆ ಇಲ್ಲ. ಜನತೆಯ ಸೇವೆ ಮಾಡುವ ಒಂದು ಮಾರ್ಗವಾಗಿ ನಾನು ರಾಜಕೀಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನನ್ನನ್ನು ನೀವೆಲ್ಲರೂ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ದೇವೇಗೌಡರ ಕುಟುಂಬವನ್ನು ಮುಗಿಸಲೇಬೇಕೆಂದು ಇಡೀ ಸಚಿವ ಸಂಪುಟ ಇಲ್ಲಿಗೆ ಬಂದಿದ್ದು, ನಿಮ್ಮಂತಹ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರು ಇರುವವರೆಗೂ ಅದು ಸಾಧ್ಯವಿಲ್ಲದ ಮಾತಾಗಿದ್ದು, ಕುಮಾರಣ್ಣ ಅವರ ಜನಪರ ಆಡಳಿತ, ದೇವೇಗೌಡರ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ, ಬಿಜೆಪಿ ಜತೆ ಮೈತ್ರಿಯಾದ ಬಳಿಕ ಕುಮಾರಣ್ಣ ಅವರಿಂದ ತೆರವಾದ ಜಾಗಕ್ಕೆ ಯೋಗೇಶ್ವರ್‌ ಅವರನ್ನೇ ಅಭ್ಯರ್ಥಿ ಮಾಡಲು ಎರಡು ಪಕ್ಷದ ನಾಯಕರು ತೀರ್ಮಾನಿಸಿದ್ದೆವು. ನಮ್ಮ ಪಕ್ಷದ ಚಿಹ್ನೆಯಡಿ ನಿಲ್ಲಲು ಕೇಳಿಕೊಂಡಾಗ ಒಪ್ಪಿ ನಂತರ ಕಾಂಗ್ರೆಸ್‌ ಸೇರುವ ಮುಖೇನ ನಂಬಿಸಿ ಕುತ್ತಿಗೆಕೊಯ್ದಿದ್ದು ಇದಕ್ಕೆ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಯೋಗೇಶ್ವರ್‌ ವಿರುದ್ಧ ಹರಿಹಾಯ್ದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಿ ಕೆ ಸುರೇಶ್ ಗೆದ್ದಿದ್ದರೆ ಜೆಡಿಎಸ್ ಪಕ್ಷದ ಕಾರ್ಯಕರ್ತರ ಕೊಡುಗೆಯೂ ಇದೆ ಎಂದು ಇದೇ ವೇಳೆ ಹೇಳಿದರು.

ಈ ನಡುವೆ ಮಾಕಳಿ ಗ್ರಾಮಕ್ಕೆ ನಿಖಿಲ್‌ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಕೆಲ ಯುವಕರು ನಿಖಿಲ್‌ರನ್ನು ಎತ್ತಿ ಕುಣಿದು ಕುಪ್ಪಳಿಸಿದರು. ಗ್ರಾಮದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಸಹ ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ನಿಖಿಲ್ ಅವರು, ಹಿಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಡಿದಂತೆ ಕಾಂಗ್ರೆಸ್ ಪಕ್ಷವು ಉಡುಗೊರೆ, ಕೂಪನ್‌ಗಳನ್ನು ನೀಡಿ ಮತದಾರರಿಗೆ ಆಮಿಷ ಒಡ್ಡುವ ಸಾಧ್ಯತೆಗಳಿವೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಬೇಕೆಂದು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com