ಬೆಂಗಳೂರು: ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಎಲ್ಲ ಪ್ರಯತ್ನಗಳನ್ನು ನಡೆಸುತ್ತಿರುವ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಆಡಳಿತಾರೂಢ ಕಾಂಗ್ರೆಸ್ ನಾಯಕರ ಪ್ರಚೋದನಕಾರಿ ಹೇಳಿಕೆಗಳಿಗೆ ಪ್ರತಿಕ್ರಿಯಿಸದೆ ದೂರ ಉಳಿದಿದ್ದಾರೆ.
ನಿಖಿಲ್ ಪರ ಪ್ರಚಾರ ಮಾಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆಂಬ್ಯುಲೆನ್ಸ್ ಮೂಲಕ ಆಗಮಿಸಲಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ವ್ಯಂಗ್ಯವಾಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಸೂಕ್ತ ಸಮಯದಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಕೇವಲ ಸುರೇಶ್ ಮಾತ್ರವಲ್ಲ, ದೇವೇಗೌಡರ ಗರಡಿಯಲ್ಲಿ ಪಳಗಿರುವ ಮಾಜಿ ಶಾಸಕ ಎಂಸಿ ಅಶ್ವಥ್ ಮತ್ತು ಮಾಗಡಿ ಶಾಸಕ ಬಾಲಕೃಷ್ಣ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದು, ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ ಎಂದಿದ್ದಾರೆ.
ಮಾಜಿ ಶಾಸಕ ಅಶ್ವತ್ಥ್ ಅವರು ಕೊಟ್ಟಿದ್ದ ಹೇಳಿಕೆಯನ್ನು ಇದೀಗ ಡಿಕೆ ಸುರೇಶ್ ಕೊಡ್ತಾ ಇದ್ದಾರೆ. ದೇವೇಗೌಡರ ಆರೋಗ್ಯದ ಬಗ್ಗೆ ಅಷ್ಟೊಂದು ಕೇವಲವಾಗಿ ಮಾತಾಡ್ತಾ ಇದ್ದಾರೆ. ಇದೇ ಅಶ್ವತ್ಥ್ ಪರವಾಗಿ ಹಳ್ಳಿ ಹಳ್ಳಿಗೆ ದೇವೇಗೌಡರು ಪ್ರಚಾರಕ್ಕೆ ಬಂದಿದ್ರು ಅಲ್ವಾ? ಆಗ ವ್ಯಾಮೋಹಕ್ಕೆ ದೇವೇಗೌಡರು ಬಂದಿದ್ದರಾ? ಎಂದು ಪ್ರಶ್ನಿಸಿದರು. ದೇವೇಗೌಡರು ಚನ್ನಪಟ್ಟಣಕ್ಕೆ ಬರುತ್ತಾ ಇರುವುದು ಅವರ ಮೊಮ್ಮಗನ ಪಟ್ಟಾಭಿಷೇಕಕ್ಕಾಗಿ ಹೇಳ್ತೀರಾ ಅಲ್ವಾ? ಅಶ್ವತ್ಥ್ ನ ಗೆಲ್ಲಿಸಬೇಕಾದರೆ ಅವತ್ತು ದೇವೇಗೌಡರು ಹೋಗಿರಲಿಲ್ವಾ ಅಲ್ಲಿ? ಅವತ್ತು ಯಾರಿಗೋಸ್ಕರ ಹೋಗಿದ್ರು ದೇವೇಗೌಡರು? ಈ ರೀತಿಯ ಸಣ್ಣತನದ ಮಾತುಗಳು ಇದೆಯಲ್ಲ, ಇದಕ್ಕೆ ಕಾಲವೇ ಉತ್ತರ ನೀಡುತ್ತೆ ಎಂಬುದು ನನ್ನ ಅಭಿಪ್ರಾಯ ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಅದಕ್ಕಾಗಿ ಯೋಗೇಶ್ವರ್ ಗೆಲ್ಲಿಸಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆಸಿದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ರಾಜಕೀಯವಾಗಿ ಮಾತನಾಡೋದು ಸರ್ವೆ ಸಾಮಾನ್ಯ. ಆದರೆ ಮೊಮ್ಮಗನ ಪಟ್ಟಾಭಿಷೇಕಕ್ಕೆ ದೇವೇಗೌಡ್ರು ಆ್ಯಂಬುಲೆನ್ಸ್‌ನಲ್ಲಿ ಬರ್ತಾರೆ ಅನ್ನೊದು ಸರಿಯಲ್ಲ. ಅಂತಹ ದುರ್ದೈವ ನಮಗೆ ಬಂದಿಲ್ಲ. ರಾಜ್ಯದ ಜನರ ಆಶಿರ್ವಾದಿಂದ ಅವರು ಶಕ್ತಿಯುತವಾಗಿದ್ದಾರೆ. ದೀಪಾವಳಿ ಬಳಿಕ ಅವರೇ ಬಂದು ಪ್ರಚಾರ ಮಾಡ್ತಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದರು.
36 ವರ್ಷದ ನಿಖಿಲ್ ಮೂರನೇ ಬಾರಿಯ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರುಗಳ ಪ್ರಚೋದನಕಾರಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡದೆ ಇರಲು ನಿರ್ಧರಿಸಿದ್ದಾರೆ. ರಾಜಕೀಯವಾಗಿ ವ್ಯಂಗ್ಯವಾಡುವ ಬದಲು ಅಭಿವೃದ್ಧಿಯ ಕುರಿತು ಚರ್ಚೆಗಳ ಅಗತ್ಯದ ಬಗ್ಗೆ ನಿಖಿಲ್ ಹೇಳಿದ್ದಾರೆ. ದೇವೇಗೌಡರ ವಿರುದ್ಧ ಈ ರೀತಿಯ ಹೇಳಿಕೆ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಒಪ್ಪಿಕೊಂಡಿದ್ದಾರೆ.
ದೇವೇಗೌಡರು ಪ್ರಚಾರಕ್ಕೆ ಬರುವುದರಿಂದ ಒಕ್ಕಲಿಗ ಸಮುದಾಯದ ಮತಗಳು ಧ್ರುವೀಕರಣಗೊಳ್ಳುತ್ತವೆ ಎಂಬ ಭರವಸೆಯಲ್ಲಿ ತಂದೆ-ಮಗನ ಭರವಸೆಯಲ್ಲಿದ್ದಾರೆ. ಕುಮಾರಸ್ವಾಮಿ ಅವರು ಹಿಂದಿನ ಮೈಸೂರು ರಾಜಮನೆತನದ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಬೆಂಬಲವನ್ನು ಪ್ರಚಾರಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ, ರಾಜಮನೆತನವು ಈ ಪ್ರದೇಶದಲ್ಲಿ ತನ್ನದೇ ಆದ ಬೆಂಬಲಿಗರನ್ನು ಹೊಂದಿದೆ. ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ಅಮ್ಮಣ್ಣಿಯವರ ಭಾವಚಿತ್ರಗಳು ಇನ್ನೂ ಕೆಲವು ಕುಟುಂಬದ ಮನೆಗಳ ಗೋಡೆಗಳಲ್ಲಿದ್ದು, ಅವರ ಕುಟುಂಬವನ್ನು ಇಲ್ಲಿನ ಜನರು ದೇವರ ಫೋಟಗಳೊಂದಿಗೆ ಪೂಜಿಸುತ್ತಾರೆ. ಮೂಲಗಳ ಪ್ರಕಾರ, ರಾಜಮನೆತನವನ್ನು ಬೆಂಬಲಿಸುವ ಸುಮಾರು 13,000 ಮತದಾರರಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಹಾಗೂ ಅಹಿಂದ ನಾಯಕ ಸಿದ್ದರಾಮಯ್ಯ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರ ಮೇಲೆ ವೈಯಕ್ತಿಕವಾಗಿ ವಾಗ್ದಾಳಿ ನಡೆಸದಿರಲು ಕುಮಾರಸ್ವಾಮಿ ಮತ್ತು ನಿಖಿಲ್ ನಿರ್ಧರಿಸಿದ್ದಾರೆ. ದಲಿತ ಮತದಾರರ ಓಲೈಕೆಗೆ ನಿಖಿಲ್ ಸೋಮವಾರ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
Advertisement