ರಾಜಮನೆತನದಿಂದ ಚಾಮುಂಡೇಶ್ವರಿ ಸೇವೆ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ಕಿತ್ತುಕೊಂಡಿದೆ: ಕುಮಾರಸ್ವಾಮಿ
ಚನ್ನಪಟ್ಟಣ: ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹಾಗೂ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೋಮವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚಾಮುಂಡೇಶ್ವರಿ ತಾಯಿ ಅರಸು ಮನೆತನದ ದೇವತೆ. ಅವರ ಕುಟುಂಬದ ಆರಾಧ್ಯದೈವ. ಅವರ ಮನೆತನದಿಂದ ದೇವರನ್ನು ದೂರ ಮಾಡುವ ಕೇಡಿನ ಕೆಲಸ ಮಾಡುತ್ತಿದೆ ಈ ಸರ್ಕಾರ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಸೋಮವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಕೂಡ್ಲೂರು ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಚಾಮುಂಡೇಶ್ವರಿ ಪುಣ್ಯಕ್ಷೇತ್ರ ಅರಸರ ಉಸ್ತುವಾರಿಯಲ್ಲಿಯೇ ಇತ್ತು. ಆ ಕ್ಷೇತ್ರದ ಅಭಿವೃದ್ಧಿಗೆ ಒಡೆಯರ್ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ, ನೀರಾವರಿ, ಶಿಕ್ಷಣ, ಕೈಗಾರಿಕಾಭಿವೃದ್ಧಿಗೆ ಮಹಾರಾಜರು ಅನನ್ಯ ಕೊಡುಗೆ ನೀಡಿದ್ದಾರೆ. ಅಂತಹ ಕುಟುಂಬಕ್ಕೆ ಸಿದ್ದರಾಮಯ್ಯ ಸರ್ಕಾರ ಇನ್ನಿಲ್ಲದ ಕಿರುಕುಳ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ರಾಜಮನೆತನ ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತಿತ್ತು. ತಾಯಿಯ ಸನ್ನಿಧಾನದಲ್ಲಿ ನಡೆಯುತ್ತಿದ್ದ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಗಳಿಂದ ನೋಡಿಕೊಳ್ಳುತ್ತಿತ್ತು. ಅಂತಹ ಕುಟುಂಬಕ್ಕೆ ದಕ್ಕಿದ್ದ ದೇವರ ಸೇವೆ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ಕಿತ್ತುಕೊಂಡಿದೆ ಎಂದು ಅವರು ಆರೋಪಿಸಿದರು. ಮೈಸೂರು ರಾಜ ವಂಶಸ್ಥರು ಹಾಗೂ ಮೈಸೂರು-ಕೊಡಗು ಕ್ಷೇತ್ರದ ಲೋಕಸಭೆ ಸದಸ್ಯ ಯದುವೀರ್ ಒಡೆಯರ್ ಅವರು ಕೂಡ ಉಪಸ್ಥಿತರಿದ್ದರು.
ನಾವು ಟಿಕೆಟ್ ಕೊಡುತ್ತೇವೆ ಎಂದೆವು. ಬಿಜೆಪಿ ಕೂಡ ಟಿಕೆಟ್ ಕೊಡಲು ಮುಂದಾಗಿತ್ತು. ಬಿಜೆಪಿ ವರಿಷ್ಠ ನಾಯಕರ ಮಾತಿಗೆ ತಲೆಬಾಗಿ ನಾವು ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧಾರ ಮಾಡಿದ್ದೆವು. ಆದರೆ, ಎಲ್ಲರ ಮಾತನ್ನು ಧಿಕ್ಕರಿಸಿ, ಕಾಲಿನಲ್ಲಿ ಒದ್ದು ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿಕೊಂಡರು. ಈಗ ನೋಡಿದರೆ ಹಾದಿಬೀದಿಯಲ್ಲಿ ಸುಳ್ಳು ಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ದೂರಿದರು.
ದೇವರಹೊಸಹಳ್ಳಿ ಗ್ರಾಮದಲ್ಲಿ ಪ್ರಚಾರದ ಮೂಲಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಯದುವೀರ್, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಆರ್ಥಿಕತೆ ಹಳಿತಪ್ಪಿಸಿದೆ ಎಂದು ಆರೋಪಿಸಿದರು. ಒಂದೂವರೆ ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸದೃಢ ಆರ್ಥಿಕತೆಯಿಲ್ಲದೆ ತನ್ನ ಸಮತೋಲನವನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಗರಣಗಳ ಸುಳಿಯಲ್ಲಿ ಸಿಲುಕಿದೆ. ಮುಡಾ ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆದ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ನಾಯಕತ್ವ ಗುಣವನ್ನು ಪ್ರದರ್ಶಿಸಿ ಮಹತ್ವದ ಪಾತ್ರ ವಹಿಸಿದ್ದರು. ಉತ್ತಮ ನಾಯಕನಾಗಿ ಬೆಳೆಯಲು ಚನ್ನಪಟ್ಟಣದ ಜನತೆ ನಿಖಿಲ್ ಅವರನ್ನು ಬೆಂಬಲಿಸಬೇಕು ಎಂದರು ಮೋದಿಯವರ ನಾಯಕತ್ವದಲ್ಲಿ ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಮತ್ತು ಕುಮಾರಸ್ವಾಮಿ ಸಂಪುಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಯದುವೀರ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ