'ಕೈ' ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ತೆರೆಮರೆಯಲ್ಲಿ ಕಸರತ್ತು: ಜಾರಕಿಹೊಳಿ ಬಳಿಕ ಮತ್ತೊಬ್ಬ ಸಚಿವರ ಜೊತೆ ಪರಂ ಚರ್ಚೆ!

ಶುಕ್ರವಾರ ಸಕಲೇಶಪುರದಲ್ಲಿ ನಡೆದ ಎತ್ತಿನಹೊಳೆ ಮೊದಲ ಹಂತದ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಬ್ಬರೂ ಸಚಿವರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಇಬ್ಬರೂ ನಾಯಕರು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದು, ಭೇಟಿ ವೇಳೆ ನಾಯಕರ ಮಾತುಕತೆ ಕುತೂಹಲ ಮೂಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮೈಸೂರು ಮುಡಾ ನಿವೇಶನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೇಲ್ನೋಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ ಕೆಲ ಸಚಿವರು ಮತ್ತು ಮುಖಂಡರೇ ತೆರೆಮರೆಯಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಹಿಂದೆ ಸಚಿವ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಡಾ.ಜಿ.ಪರಮೇಶ್ವರ್ ಅವರು, ಇದೀಗ ಸಚಿವ ಎಂಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದು, ನಾಯಕರ ಈ ಭೇಟಿ ಕುತೂಹಲ ಮೂಡಿಸಿದೆ.

ವಾರದ ಹಿಂದಷ್ಟೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದ ಪರಮೇಶ್ವರ್ ಅವರು ಮಾತುಕತೆ ನಡೆಸಿದ್ದರು. ಇಬ್ಬರು ನಾಯಕರ ಮಾತುಕತೆ ಸಾಕಷ್ಟು ಕುತೂಹಲಗಳನ್ನು ಕೆರಳಿಸಿದ್ದವು.

ಶುಕ್ರವಾರ ಸಕಲೇಶಪುರದಲ್ಲಿ ನಡೆದ ಎತ್ತಿನಹೊಳೆ ಮೊದಲ ಹಂತದ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಬ್ಬರೂ ಸಚಿವರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಇಬ್ಬರೂ ನಾಯಕರು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದು, ಭೇಟಿ ವೇಳೆ ನಾಯಕರ ಮಾತುಕತೆ ಕುತೂಹಲ ಮೂಡಿಸಿದೆ.

ಇಬ್ಬರೂ ನಾಯಕರು ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗುತ್ತಿದ್ದು, ಬ್ರೇಕ್ ಪಾಸ್ಟ್ ಮೀಟಿಂಗ್ ಬಳಿಕ ಯಾವುದೇ ಪ್ರತಿಕ್ರಿಯೆ ನೀಡಲು ಉಭಯ ನಾಯಕರು ನಿರಾಕರಿಸಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ಇಬ್ಬರು ಒಂದೇ ಕಾರಿನಲ್ಲಿ ಎತ್ತಿನಹೊಳೆ ಯೋಜನೆ ಉದ್ಘಾಟನೆಗಾಗಿ ಸಕಲೇಶಪುರಕ್ಕೆ ಒಂದೇ ಕಾರಿನಲ್ಲಿ ತೆರಳಿದ್ದಾರೆ.

ಸಂಗ್ರಹ ಚಿತ್ರ
ಧೃಢ ಸಂಕಲ್ಪ, ಛಲವಿದ್ದರೆ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ: ಗೃಹ ಸಚಿವ ಪರಮೇಶ್ವರ್

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದ್ದು, ಈ ನಡುವಲ್ಲೇ ಕೆಲವರ ಬ್ರೇಕ್ ಫಾಸ್ಟ್ ಮತ್ತು ಡಿನ್ನರ್ ಮೀಟಿಂಗ್ ಕುತೂಹಲಕ್ಕೆ ಕಾರಣವಾಗಿದೆ.

ಪರಮೇಶ್ವರ ಅವರು ಇತ್ತೀಚೆಗೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್ ಅಹಮದ್ ಖಾನ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಅವರ ಬೆಂಬಲಿಗರೊಂದಿಗೆ ದೆಹಲಿಗೆ ಭೇಟ ನೀಡಿದ್ದರು. ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ ಬಳಿಕ ರಾಜ್ಯಕ್ಕೆ ಮರಳಿದ್ದರೂ ಪರಮೇಶ್ವರ್ ಅವರು ದೆಹಲಿಯಲ್ಲಿಯೇ ಉಳಿದುಕೊಂಡಿದ್ದು, ಹಲವರ ಆಶ್ಚರ್ಯಕ್ಕೆ ಕಾರಣವಾಗಿತ್ತು. ದೆಹಲಿಯಲ್ಲಿದ್ದ ಪರಮೇಶ್ವರ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಪರಮೇಶ್ವರ್ ಅವರು ಮೂಲತಃ ಕಾಂಗ್ರೆಸ್ ನಾಯಕರಾಗಿದ್ದು, 2008-09ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಸೋಲಿನ ಹಿಂದೆ ಸಿದ್ದರಾಮಯ್ಯ ಅವರ ಬೆಂಬಲಿಗರಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬೆಳವಣಿಗೆಗಳಾಗಿ ಹಲವು ವರ್ಷಗಳು ಕಳೆದಿದ್ದು, ಇದೀಗ ರಾಜಕೀಯ ಸನ್ನಿವೇಶಗಳು ಬದಲಾಗಿವೆ. ಪಕ್ಷದ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com