ರಾಮನಗರ: ಗ್ಯಾರಂಟಿ ಯೋಜನೆ ಕುರಿತು ಅಂದು ನಮ್ಮನ್ನು ಟೀಕಿಸಿದ್ದವರು ಇಂದು ಕಾಶ್ಮೀರದಲ್ಲಿ ನಮ್ಮದೇ ಯೋಜನೆಯನ್ನೇ ಘೋಷಣೆ ಮಾಡಿದ್ದಾರೆಂದು ಕೇಂದ್ರ ಸರ್ಕಾರದ ಕುರಿತು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
ಕನಕಪುರದ ಹಾರೋಬೆಲೆಯಲ್ಲಿ ಆರ್ಕಾವತಿ ಜಲಾಶಯ ಬಲದಂಡೆ ಏತನೀರಾವರಿ ಯೋಜನೆಯ ಪುನಶ್ವೇತನ ಕಾಮಗಾರಿಯ ಪರೀಕ್ಷಾರ್ಥ ಚಾಲನಾ ಸಮಾರಂಭದಲ್ಲಿ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.
ಈ ವೇಳೆ ಬಿಜೆಪಿಯವರು ಕರ್ನಾಟಕ ಸರ್ಕಾರದ ಮಾದರಿಯನ್ನು ಅನುಕರಣೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕುಟುಕಿದರು.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ 2 ಸಾವಿರ ರೂಪಾಯಿ ಕೊಡುತ್ತಿದ್ದು, ಅದನ್ನೇ ಕಾಪಿ ಮಾಡಿರುವ ಅಮಿತ್ ಶಾ ಅವರು, ಕಾಶ್ಮೀರದಲ್ಲಿ ಮಹಿಳೆಯರಿಗೆ 1.5 ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆಂದು ಹೇಳಿದಾಗ ರಾಜ್ಯ ದಿವಾಳಿ ಆಗುತ್ತದೆಂದು ಬಿಜೆಪಿಯವರು ಟೀಕಿಸಿದ್ದರು. ಇದೀಗ ಕಾಶ್ಮೀರದಲ್ಲಿ ಅಮಿತ್ ಶಾ ಅವರೇ 1500 ರೂಪಾಯಿ ಕೊಡುವುದಾಗಿ ಬೋರ್ಡ್ ಹಿಡಿಯುತ್ತಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ನಮ್ಮ ಅಭಿವೃದ್ಧಿ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ಕನಕಪುರ ಎಲ್ಲರಿಗೂ ಮಾದರಿಯಾಗಿದೆ. ಕನಕಪುರದಲ್ಲಿ ಹಾಲು ಉತ್ಪಾದನಾ ಕೇಂದ್ರ ಮಾಡಿದ್ದೇವೆ. ಶಿವನಹಳ್ಳಿ ಬಳಿ ಡೈರಿ ಮಾಡಿದ್ದೇವೆ. ಇಡೀ ದೇಶದಲ್ಲೇ ಅತ್ಯುತ್ತಮ ಎಂದು ಹೇಳಲಾಗುತ್ತಿರುವ ಅಮುಲ್ ಗಿಂತಲೂ ಉತ್ತಮವಾದ ಯಂತ್ರಗಳ ಸೌಲಭ್ಯ ಇಂದು ಶಿವನಹಳ್ಳಿಯಲ್ಲಿದೆ. ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ, ಅವರ ಕಛೇರಿಯ ಸಿಬ್ಬಂದಿ ಎಲ್ಲ ಇಲ್ಲಿಗೆ ಬಂದು ನೋಡಿಕೊಂಡು ಹೋಗಿದ್ದಾರೆ. ಡಿಕೆ ಶಿವಕುಮಾರ್ ಕ್ಷೇತ್ರ ಎಂದು ತಿಳಿದ ಮೇಲೆ ಬರುವುದನ್ನು ಬಿಟ್ಟುಬಿಟ್ಟರು. ಈ ರೀತಿ ಹೈನುಗಾರಿಕೆ, ನೀರಾವರಿ, ರಸ್ತೆ, ವಿದ್ಯುಚ್ಚಕ್ತಿ ವಿಚಾರಗಳಲ್ಲಿ ನಮ್ಮ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಇಡೀ ರಾಜ್ಯದಲ್ಲಿ ಬೇರೆಲ್ಲೂ ಮಾಡಲಾಗಿಲ್ಲ ಎಂದು ತಿಳಿಸಿದರು.
ಬಳಿಕ ಮುಡಾ ಹಾಗೂ ವಾಲ್ಮೀಕಿ ಹಗರಣ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯಲು ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಫೋಟೋ ವೈರಲ್ ಮಾಡಲಾಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿರುದ್ಧ ಕಿಡಿಕಾರಿದರು.
ದರ್ಶನ್, ಮುಡಾ ಆರೋಪದ ವಿಚಾರ ಬಿಡಿ. ಈಗ ಮಹದಾಯಿ ವಿಚಾರದಲ್ಲಿ ಏನು ತೊಂದರೆಯಾಗಿದೆ. ಮಹದಾಯಿ ಯೋಜನೆಗೆ ಅನುಮತಿ ಕೊಡಿಸ್ರಪ್ಪ ಎಂದು ಸವಾಲು ಹಾಕಿದರು.
ಗಣೇಶ ಚತುರ್ಥಿ ಹಬ್ಬದ ದಿನವೇ ವಿಘ್ನ ನಿವಾರಣೆ ಆಗಲಿ. ಮಹದಾಯಿ ಯೋಜನೆ ಜಾರಿ ಮಾಡಲು ದುಡ್ಡು ಕೊಡಿಸ್ರಪ್ಪ. ಇಲ್ಲಿಂದಲೇ ದೀರ್ಘದಂಡ ನಮಸ್ಕಾರ ಹಾಕುತ್ತೇನೆ ಎಂದು ವ್ಯಂಗ್ಯವಾಡಿದರು.
Advertisement