ಬೆಂಗಳೂರು: ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ಬಿಜೆಪಿ ಕರೆ ನೀಡಿದೆ.
ಚಿಕ್ಕಮಗಳೂರಿನಲ್ಲಿ ಪಕ್ಷದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಶಾಸಕ ಹಾಗೂ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಅವರು, ರಾಹುಲ್ ಗಾಂಧಿಯವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ನಾಳೆ ರಾಜ್ಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದರು.
ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಕಾಂಗ್ರೆಸ್ ನಾಯಕರಿಗೆ ಮುತ್ತಿಗೆ ಹಾಕುವಂತೆ ಸಹ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಕರೆ ನೀಡಿದೆ. ಕಾಂಗ್ರೆಸ್ ಪಕ್ಷದ ಮೀಸಲಾತಿ ವಿರೋಧಿ ನಿಲುವನ್ನು ವಿರೋಧಿಸಿ, ನಾವು ಗುರುವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತಿದ್ದೇವೆ. ರಾಹುಲ್ ಗಾಂಧಿ ಅವರು ತಮ್ಮ ಅಮೆರಿಕ ಪ್ರವಾಸದಿಂದ ಭಾರತಕ್ಕೆ ಹಿಂದಿರುಗುವ ವೇಳೆಗೆ, ಕಾಂಗ್ರೆಸ್ ಪಕ್ಷ ಅವರ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಸುನೀಲ್ ಕುಮಾರ್ ಒತ್ತಾಯಿಸಿದರು.
ರಾಹುಲ್ ಗಾಂಧಿಯವರ ಹೇಳಿಕೆಯಿಂದ ಸಂವಿಧಾನದ ಭರವಸೆಯ ಮೀಸಲಾತಿ ಅಪಾಯದಲ್ಲಿದೆ. ಅವರ ಹೇಳಿಕೆಯೂ ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಲವು ಕಾಂಗ್ರೆಸ್ ನಾಯಕರು ಸಂವಿಧಾನದ ಕುರಿತು ಸುದೀರ್ಘ ಭಾಷಣ ಮಾಡುತ್ತಾರೆ. ಆದರೆ ಈಗ ರಾಹುಲ್ ಗಾಂಧಿ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಖಂಡಿಸುವರೇ? ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.
ಸಾಮಾಜಿಕ ನ್ಯಾಯದ ಬಗ್ಗೆ ಆಗಾಗ ಮಾತನಾಡುವ ಸಿಎಂ ಸಿದ್ದರಾಮಯ್ಯ ಈಗ ಏಕೆ ಮೌನವಾಗಿದ್ದಾರೆ? ಅವರು ಮುಂದೆ ಬಂದು ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬೇಕು'' ಎಂದು ಆಗ್ರಹಿಸಿದರು.
Advertisement