ಬೆಂಗಳೂರು: ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿನ ಜಾಹೀರಾತು ಪರಿಶೀಲನಾ ಸಮಿತಿಗೆ ಕಾಂಗ್ರೆಸ್ ಪದಾಧಿಕಾರಿಗಳನ್ನು ನೇಮಿಸಿರುವ ಕುರಿತು ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರ ಯಾವ ಆಧಾರದ ಮೇಲೆ ಕೆಪಿಸಿಸಿ ಪದಾಧಿಕಾರಿಗಳನ್ನು ನೇಮಕ ಮಾಡಿದೆ? ಪರೋಕ್ಷವಾಗಿ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆಯೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದರು. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಅಶೋಕ್ ಬರೆದುಕೊಂಡಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೂತನವಾಗಿ ಜಾಹೀರಾತು ಪರಿಶೀಲನಾ ಸಮಿತಿ ರಚನೆ ಮಾಡಿರುವ ಕಾಂಗ್ರೆಸ್ ಸರ್ಕಾರ ಕೆಪಿಸಿಸಿ ವಕ್ತಾರ ರಮಶ್ ಬಾಬು ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಾಮಚಂದ್ರಪ್ಪ ಅವರುಗಳನ್ನ ಸಮಿತಿಯಲ್ಲಿ ನೇಮಕ ಮಾಡಿದೆ.
ಸಿಎಂ ಸಿದ್ದರಾಮಯ್ಯನವರೇ, ಜಾಹೀರಾತುಗಳನ್ನ ಪರಿಶೀಲನೆ ಮಾಡಲು ತಮ್ಮ ಪಕ್ಷದ ಪದಾಧಿಕಾರಿಗಳನ್ನು ನೇಮಿಸಿದ್ದೀರಲ್ಲ, ಕೆಪಿಸಿಸಿ ವಕ್ತಾರರಿಗೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಜಾಹೀರಾತು ಪರಿಶೀಲನೆ ಮಾಡುವ ಯಾವ ಅರ್ಹತೆ ಇದೆ? ಯಾವ ಅನುಭವ ಇದೆ? ಜಾಹೀರಾತು ಪರಿಶೀಲನೆ ಸಮಿತಿಗೆ ಅರ್ಹರನ್ನ ನೇಮಕ ಮಾಡಬೇಕಾದರೆ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಂಪಾದಕರನ್ನೋ ಅಥವಾ ವಾರ್ತಾ ಇಲಾಖೆಯ ಜಾಹಿರಾತು ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅನುಭವಿ ಅಧಿಕಾರಿಗಳನ್ನೋ ನೇಮಿಸಬಹುದಿತ್ತು. ಅದು ಬಿಟ್ಟು ಜಾಹೀರಾತು ಪರಿಶೀಲನಾ ಸಮಿತಿಗೆ ಆಡಳಿತ ಪಕ್ಷದ ಪದಾಧಿಕಾರಿಗಳನ್ನು ನೇಮಕ ಮಾಡಿರುವುದು ಎಷ್ಟು ಸಮಂಜಸ? ಸರಣಿ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಸರ್ಕಾರ ಜನಮನ್ನಣೆ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಇಂತಹ ನಡೆ ಸಹಜವಾಗಿ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ನಡೆಯ ಹಿಂದೆ ಮಾಧ್ಯಮಗಳನ್ನ ಪರೋಕ್ಷವಾಗಿ ನಿಯಂತ್ರಣ ಮಾಡುವ ಹುನ್ನಾರ ಇದೆಯೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
Advertisement