ಬೆಂಗಳೂರು: ನಿಮ್ಮ ಸಮುದಾಯದ ಹಾಗೂ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿಯನ್ನು ನೀವು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ ಎಂದು ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಅಶೋಕ್ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಪ್ರಶ್ನಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುನಿರತ್ನ ಮಾಡಿರುವ ಕೃತ್ಯವನ್ನು ಕಾಂಗ್ರೆಸ್ ಪಕ್ಷದ ನಾಯಕರೇನಾದರೂ ಮಾಡಿದ್ದರೆ ನಿಮ್ಮ ಮಾತುಗಳು ಯಾವ ರೀತಿ ಇರುತ್ತಿದ್ದವು? ಇದಕ್ಕೆ ರಾಜಕೀಯವನ್ನು ಬೆರೆಸಬೇಡಿ, ಸರಿಯಾಗಿ ಮಾತನಾಡಿ. ನಿಮ್ಮ ಪಕ್ಷ ಇದಕ್ಕೆ ಬೆಂಬಲವಾಗಿ ನಿಂತಿದ್ದೀಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
ಕೆಲವು ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಇದಕ್ಕೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ, ಸಾಕ್ಷ್ಯಾಧಾರಗಳು ಸ್ಪಷ್ಟವಾಗಿರುವಾಗ ಹೀಗೆ ಮಾಡುವುದು ಸರಿಯೇ? ಮಹಿಳೆಯರ ವಿರುದ್ಧದ ಅವರ ನಿಂದನೆ ಸ್ವೀಕಾರಾರ್ಹವಲ್ಲ, ಹಾಗೆಯೇ ಒಕ್ಕಲಿಗ ಸಮುದಾಯದ ವಿರುದ್ಧ ಅವರ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಇದೇ ವೇಳೆ ಮುನಿರತ್ನ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂಬ ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರು ಮತ್ತು ಸಮುದಾಯದ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುವಂತೆ ಯಾರೂ ಅವರನ್ನು (ಮುನಿರತ್ನ) ಕೇಳಲಿಲ್ಲ, ಪೊಲೀಸರು ಪ್ರಕರಣವನ್ನು ತನಿಖೆ ಮಾಡುತ್ತಿದ್ದು, ಸತ್ಯ ಹೊರಬರುತ್ತದೆ ಎಂದು ತಿಳಿಸಿದರು.
ಈ ನಡುವೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಮುನಿರತ್ನ ವಿರುದ್ಧ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರು ವಿಡಿಯೋ ಬಿಡುಗಡೆ ಮಾಡಿದ ಗುತ್ತಿಗೆದಾರ ಚಲುವರಾಜು ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮುನಿರತ್ನ ಅವರ ಗೂಂಡಾಗಿರಿಯ ಬಗ್ಗೆ ಅನೇಕರು ದೂರು ನೀಡುತ್ತಿದ್ದರು, ಆದರೆ, ಪೊಲೀಸರಿಗೆ ದೂರು ನೀಡುವ ಧೈರ್ಯ ಯಾರಿಗೂ ಇರಲಿಲ್ಲ. ಈಗ ಚಲುವರಾಜು ಮುನಿರತ್ನ ಅವರ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ. ದಲಿತರು, ಮಹಿಳೆಯರು, ಒಕ್ಕಲಿಗರ ಮೇಲೆ ದೌರ್ಜನ್ಯ ಎಸಗಿರುವ ಮುನಿರತ್ನ ಅವರು ಶಾಸಕರಾಗಲು ಅರ್ಹರಲ್ಲ, ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದಲೇ ಶಾಸಕನಾಗಿದ್ದೇನೆ ಎಂಬುದನ್ನು ಮುನಿರತ್ನ ಮರೆತಿರಬಹುದು, ಆದರೆ, ಅಧಿಕಾರದ ಅಮಲಿನಲ್ಲಿರುವ ನಾಯಕನಿಗೆ ಜನ ತಕ್ಕ ಪಾಠ ಕಲಿಸಬಹುದು. ಎಂದು ಹೇಳಿದ್ದಾರೆ.
Advertisement