
ಶಿವಮೊಗ್ಗ: ಕೆಲವು ನಾಯಕರು ತಮ್ಮ ನಾಯಕತ್ವವನ್ನು ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಂಡು, ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ಸಾಧಿಸುವತ್ತ ಕೆಲಸ ಮಾಡುವುದಾಗಿ ಮಂಗಳವಾರ ಹೇಳಿದ್ದಾರೆ.
ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಟೀಕೆಗಳನ್ನು ತಳ್ಳಿಹಾಕಿದ ಅವರು, ತಾವು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಎಂಬ ಬಗ್ಗೆ ಹೆಮ್ಮೆ ಇದೆ. ಆದರೆ ದುರಹಂಕಾರ ಇಲ್ಲ ಎಂದು ಪ್ರತಿಪಾದಿಸಿದರು.
ಹಿರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕೆಲವು ಮುಖಂಡರು ವಿಜಯೇಂದ್ರ ಅವರನ್ನು ಬಹಿರಂಗವಾಗಿ ಟೀಕಿಸಿದ್ದಾರೆ, ಅವರು ಆಡಳಿತಾರೂಢ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಮತ್ತು ಯಡಿಯೂರಪ್ಪ ಜೊತೆಗೆ ಪಕ್ಷವನ್ನು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಎಲ್ಲವನ್ನೂ ಪಕ್ಷದ ಹಿತಾಸಕ್ತಿಯಿಂದ ನುಂಗಿಕೊಳ್ಳುತ್ತೇನೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಮುಂದಿರುವ ಗುರಿ. ನಾನು ಆ ದಿಕ್ಕಿನಲ್ಲಿ ಹೋಗುತ್ತಿದ್ದೇನೆ ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪಕ್ಷದ ವರಿಷ್ಠರು ಆಶೀರ್ವಾದ ಮಾಡಿ ಜವಾಬ್ದಾರಿ ನೀಡಿದ್ದಾರೆ. "ನಾನು ಜವಾಬ್ದಾರಿಯನ್ನು ನಿರ್ವಹಿಸುವ ಇಚ್ಛೆ ಮತ್ತು ಸಾಮರ್ಥ್ಯ ಎರಡನ್ನೂ ಹೊಂದಿರುವುದರಿಂದ, ಹಿರಿಯರು ನನಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ. ನಾನು ಅದನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ" ಎಂದರು.
Advertisement