ಬೆಂಗಳೂರು: ಪಕ್ಷದ ರಾಜ್ಯ ಅಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ವಹಿಸಿಕೊಂಡ ಮೇಲೆ ಬಿಜೆಪಿ ಮುರಿದ ಮನೆಯಾಗಿದೆ. ಹಲವು ನಾಯಕರು ಪದೇ ಪದೇ ವಿಜಯೇಂದ್ರ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಜಯೇಂದ್ರ ವಿರುದ್ಧ ಮುಗಿ ಬಿದ್ದಿದ್ದಾರೆ. ಈ ನಡುವೆ ಜಾರಕಿಹೊಳಿ ಬೆಂಬಲಕ್ಕೆ ಬಿಜೆಪಿಯ ಹಿರಿಯ ಉನ್ನತ ನಾಯಕರೊಬ್ಬರು ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.
ದಿವಂಗತ ಎಚ್‌ಎನ್ ಅನಂತ್ ಕುಮಾರ್ ಅವರ ನಾಯಕತ್ವದಲ್ಲಿ ಬಿಜೆಪಿಯ “ಸುವರ್ಣ ಯುಗ” ಹೊಂದಿತ್ತು ಎಂದು ರಮೇಶ್ ಜಾರಕಿಹೊಳಿ ಹೊಗಳಿರುವುದು ಪಕ್ಷದಲ್ಲಿ ಬೆಂಕಿಯ ಬಿರುಗಾಳಿಯನ್ನು ಎಬ್ಬಿಸಿದೆ. 2019ರ ವರೆಗೆ ಕಾಂಗ್ರೆಸ್ ಜೊತೆಗಿದ್ದ ಜಾರಕಿಹೊಳಿ ಅವರಿಗೆ ಆ ಅವಧಿಯಲ್ಲಿ ಬಿಜೆಪಿಯ ಆಂತರಿಕ ಚಲನವಲನದ ಬಗ್ಗೆ ಹೇಗೆ ತಿಳಿದಿತ್ತು ಎಂದು ಬಿಜೆಪಿಯ ಒಳಗಿನವರು ಪ್ರಶ್ನಿಸಿದ್ದಾರೆ. ಕೆಲವರು ಹೇಳುವಂತೆ ತೆರೆಮರೆಯಲ್ಲಿ ಒಬ್ಬ "ಉನ್ನತ" ನಾಯಕ ಈ ಭಿನ್ನಮತ ಸೃಷ್ಟಿಗೆ ಕಾರಣರಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಿಜೆಪಿ ಕಚೇರಿಯಲ್ಲಿ ಗುಸುಗುಸು ಜೋರಾಗಿವೆ,
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಮತ್ತು ಇತರರು ಏಕಾಂಗಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾರ್ವಜನಿಕ ಹೇಳಿಕೆಗಳ ಮೂಲಕ ವಿಜಯೇಂದ್ರ ನಾಯಕತ್ವದ ಬಗ್ಗೆ ಆಗಾಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ನಿಗೂಢ ಹಿರಿಯ ನಾಯಕರೊಬ್ಬರು ಇವರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಈ ಮಹಾನಾಯಕ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ, ತಮ್ಮ ಹೇಳಿಕೆಗಳ ಮೂಲಕ ಭಿನ್ನಮತ ಪ್ರದರ್ಶಿಸುತ್ತಿರುವ ರಾಜ್ಯ ಬಿಜೆಪಿ ನಾಯಕರ ಮೇಲೆ ಕೇಂದ್ರದ ಹಿರಿಯ ನಾಯಕರು ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡುತ್ತಿದ್ದಾರೆ. ಹೀಗಾಗಿ ಈ ಭಿನ್ನಮತೀಯ ನಾಯಕರು ಯಾವುದೇ ಭಯವಿಲ್ಲದೆ ತಮ್ಮ ಹುಚ್ಚಾಟ ಮುಂದುವರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೀಡುತ್ತಿರುವ ಕ್ಷಿಪ್ರ ಪ್ರತಿಕ್ರಿಯೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಜಾರಕಿಹೊಳಿ ಅವರಂತಹ ನಾಯಕರು ಪಕ್ಷ ಮತ್ತು ಸಿದ್ಧಾಂತದೊಂದಿಗೆ ತೊಡಗಿಸಿಕೊಂಡಿರುವುದು ಒಳ್ಳೆಯದು ಎಂದು ಅವರು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ್ದಾರೆ. ಆದರೆ ಮುಚ್ಚಿದ ಬಾಗಿಲುಗಳ ಹಿಂದೆ, ಬಿಜೆಪಿ ಒಳಗಿನವರು ಕರಾಳ ಮತ್ತು ಕೆಟ್ಟ ನಿರೂಪಣೆಯನ್ನು ಬಹಿರಂಗಪಡಿಸುತ್ತಾರೆ. ಬಿಜೆಪಿ ಒಂದು ಶಿಸ್ತಿನ ಪಕ್ಷ, ಮತ್ತು ಯಾರಾದರೂ ಈ ರೀತಿ ಪದೇ ಪದೇ ಪಕ್ಷದ- ನಾಯಕತ್ವದ ವಿರುದ್ಧ ತಿರುಗಿ ಬೀಳುತ್ತಿರುವುದನ್ನು ನೋಡಿದರೇ ಹೈಕಮಾಂಡ್ ಮಟ್ಟದಲ್ಲಿ ಇವರುಗಳಿಗೆ ಯಾರು ಶ್ರೀರಕ್ಷೆಯಾಗಿ ನಿಂತಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ದೆಹಲಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರೂ, ಸ್ಥಳೀಯ ಚುನಾವಣೆಯಲ್ಲಿ ಸ್ವಂತ ಬಲದಿಂದ ಗೆಲ್ಲಲು ಹರಸಾಹಸ ಪಡುತ್ತಿರುವ ಹಿರಿಯ ವ್ಯಕ್ತಿಯೊಬ್ಬರು ಭಿನ್ನಮತೀಯರ ಬೆಂಬಲಕ್ಕೆ ನಿಂತಿದ್ದಾರೆ ಎಂದ ಕೆಲವು ಬಿಜೆಪಿ ನಾಯಕರು ಹೇಳುತ್ತಾರೆ. ಈ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಈಗ ಕರ್ನಾಟಕದಲ್ಲಿ ಬಿಜೆಪಿಯ ಅನಿರೀಕ್ಷಿತ ಯಶಸ್ಸಿನಿಂದ ಹತಾಶರಾಗಿ ಅಶಾಂತಿಯನ್ನು ಹುಟ್ಟುಹಾಕಲು ಅವರ ಪ್ರಭಾವವನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ‘ವೈಯಕ್ತಿಕವಾಗಿ ವಿಜಯೇಂದ್ರ ಜೊತೆ ಯತ್ನಾಳ್ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಅವರು ಯಡಿಯೂರಪ್ಪನವರ ಮಗ ಎಂಬ ಕಾರಣಕ್ಕೆ ವೈರತ್ವ ಮುಂದುವರಿಸಿದ್ದಾರೆ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ.
ದೆಹಲಿಯಲ್ಲಿರುವ ಈ ನಾಯಕ ಎಂಎಲ್ಸಿ ಸಿ.ಟಿ.ರವಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಮತ್ತು ಬಸನಗೌಡ ಯತ್ನಾಳ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ಬಯಸಿದ್ದರು, ಆದರೆ ಅವರು ಅಂದುಕೊಂಡದ್ದು ನಡೆಯದ ಕಾರಣ ಪಕ್ಷದಲ್ಲಿ ಅಶಾಂತಿ ಮೂಡಿಸಲು ಎಲ್ಲಾ ತಂತ್ರ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ವಿಜಯೇಂದ್ರ ಬಿಟ್ಟು ಬೇರೆ ಯಾರೇ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ದೆಹಲಿಯ ಈ ಉನ್ನತ ನಾಯಕನನ್ನು ನಿಯಂತ್ರಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಈ ಉನ್ನತ ನಾಯಕನಿಗೆ ಎಲ್ಲಾ ಹಂತಗಳಲ್ಲಿ ಅಸಮರ್ಥ ಅಥವಾ ನಿಷ್ಪರಿಣಾಮಕಾರಿ ಜನರು ಇರಬೇಕೆಂಬ ಬಯಕೆಯಿತ್ತು. ಎಲ್ಲಾ ಕೆಲಸಗಳಿಗೂ ತನ್ನನ್ನು ಸಂಪರ್ಕಿಸಿ ಅನುಮತಿ ಪಡೆಯುವ ರಾಜ್ಯಾಧ್ಯಕ್ಷ ಇದ್ದರೆ ಪಕ್ಷದ ಮೇಲಿನ ನಿಯಂತ್ರಣ ಸುಲಭ ಎಂಬುದು ಅವರ ಇಚ್ಛೆಯಾಗಿತ್ತು, ಆದರೆ ನಡೆದದ್ದು ಬೇರೆ. ಹೀಗಾಗಿ ಅಸಮಾಧಾನಿತ ನಾಯಕರಿಗೆ ಬೆಂಬಲ ನೀಡುವ ಮೂಲಕ ಪಕ್ಷದಲ್ಲಿ ಮತ್ತಷ್ಟು ಭಿನ್ನಮತ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಹಾ ನಾಯಕ ಯಾರು ಎಂಬುದು ಪಕ್ಷದ ಎಲ್ಲರಿಗೂ ತಿಳಿದಿದೆ. ಎಲ್ಲರೂ ಮಾತನಾಡುತ್ತಿದ್ದಾರೆ, ಆದರೆ ಯಾರೂ ಅವರ ಹೆಸರು ಹೇಳಲು ಧೈರ್ಯ ಮಾಡುವುದಿಲ್ಲ.
Advertisement